ಹಾಸನ: ಮೀಸಲು ಅರಣ್ಯದ ಹೆಸರಿನಲ್ಲಿ ಸರ್ಕಾರ ಸಾವಿರಾರು ಕುಟುಂಬಗಳ ಜೊತೆ ಚೆಲ್ಲಾಟವಾಡುತ್ತಿದ್ದು ಸಮಸ್ಯೆಗೆ ಪರಿಹಾರ ಕಲ್ಪಿಸಬೇಕೆಂದು ಮಾಜಿ ಸಚಿವ ಬಿ. ಶಿವರಾಮ್ ಆಗ್ರಹಿಸಿದರು.
ಸುದ್ದಿಗೋಷ್ಟಿಯಲ್ಲಿ ಶನಿವಾರ ಮಾತನಾಡಿ, ಬೇಲೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲೇ 20 ಸಾವಿರ ಕುಟುಂಬಗಳು ತೊಂದರೆಯಿಂದ ಬಳಲುತ್ತಿವೆ. ಅರಣ್ಯ ಇಲಾಖೆ ಅಧಿಕಾರಿಗಳು ಜಾಗ ತಮದೆಂದು ರಾತ್ರೋ ರಾತ್ರಿ ಜೆಸಿಬಿ ನುಗ್ಗಿಸಿ ಕಂದಕ ನಿರ್ಮಿಸುವುದು, ಗಿಡ ನೆಡುವುದನ್ನು ಮಾಡುತ್ತಿದೆ. ಅದನ್ನು ಪ್ರಶ್ನಿಸುವ ರೈತರ ವಿರುದ್ಧ ಕೇಸು ದಾಖಲಿಸಲಾಗುತ್ತಿದೆ. ತಾಲ್ಲೂಕಿನ ಅಡವಿ ಬಂಟೇನಹಳ್ಳಿ, ಶಿವಪುರ ಕಾವಲ್ ವ್ಯಾಪ್ತಿಯಲ್ಲಿ ವ್ಯಾಪಕ ಸಮಸ್ಯೆಯಾಗಿದ್ದು ಚಿರತೆ ರೀತಿ ಅರಣ್ಯ ಇಲಾಖೆ ರೈತರ ಮೇಲೆ ಎರಗುತ್ತಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳಬೇಕಿದ್ದ ಸರ್ಕಾರ ಜಾಣ ಮೌನ ವಹಿಸಿದೆ ಎಂದು ಆರೋಪಿಸಿದರು.
ದಶಕಗಳ ಸಮಸ್ಯೆಗೆ ಪರಿಹಾರವೇ ಇಲ್ಲದಾಗಿದೆ. ಕೆಡಿಪಿ ಸಭೆಯಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ಇದರ ಬಗ್ಗೆ ಈಗ ಮಾತನಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಾದರೂ ರೈತರ ಜಮೀನು ಉಳಿಸಿಕೊಳ್ಳುವ ಕೆಲಸವಾಗಬೇಕು.
1895 ರಲ್ಲಿ ಮೈಸೂರು ಮಹಾರಾಜರು ಮೀಸಲು ಅರಣ್ಯ ಪ್ರದೇಶವೆಂದು ಘೋಷಿಸಿದ ಜಾಗಕ್ಕೆ ನಂತರದ ದಿನಗಳಲ್ಲಿ ಸಾಗುವಳಿ ಚೀಟಿ ನೀಡಲಾಗಿದೆ. 2010ರಲ್ಲಿ ಮೀಸಲು ಅರಣ್ಯವೆಂದು ಘೋಷಿಸಲಾಗಿದೆ. ಹಾಗಿದ್ದರೆ ಸಾಗುವಳಿ ಚೀಟಿ ನೀಡಿದ್ದು ಏಕೆ ಎಂದು ಪ್ರಶ್ನಿಸಿದರು.
