ಅರಸೀಕೆರೆ: ಸಣ್ಣಪುಟ್ಟ ಕಾರಣಕ್ಕೆ ವಿವಿಧ ವರ್ಗಗಳ ಸಮುದಾಯಗಳ ಮುಖಂಡರ ಮೇಲೆ‌ ಅಟ್ರಾಸಿಟಿ ಪ್ರಕರಣ ದಾಖಲಿಸಿ ತೊಂದರೆ ನೀಡಲಾಗುತ್ತಿದೆ ಎಂದು ಆರೋಪಿಸಿ ಜೆಡಿಎಸ್ ಮುಖಂಡ ಎನ್.ಆರ್.ಸಂತೋಷ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಈ ಪ್ರತಿಭಟನೆ ಗೆ ಅನುಮತಿ ಪಡೆದಿಲ್ಲ, ಜೊತೆಗೆ ಶೀಘ್ರದಲ್ಲೇ ಹಾಸನಾಂಬೆ ಉತ್ಸವ ಆರಂಭವಾಗುತ್ತಿದೆ, ಹಾಗಾಗಿ ಸಾಮೂಹಿಕ ಪ್ರತಿಭಟನೆಗೆ ಅವಕಾಶ ನೀಡುವುದಿಲ್ಲ ಎಂದು ಪೊಲೀಸರು ತಿಳಿಸಿದರು.
ಇದು ಸಂತೋಷ್ ಮತ್ತು ಪೊಲೀಸರ ನಡುವೆ ವಾಗ್ವಾದ ಹಾಗೂ ಮಾತಿನ ಚಕಮಕಿಗೆ ಕಾರಣವಾಯಿತು. ಇದರಿಂದ ‌ಕೆಲಹೊತ್ತು ಬಿಗುವಿನ ವಾತಾವರಣ ನಿರ್ಮಾಣ ಆಗಿತ್ತು. ಆದರೂ ಪಟ್ಟು ಸಡಿಲಿಸದ ಪೊಲೀಸರು ಶಾಮಿಯಾನ ಮತ್ತು ಕುರ್ಚಿಗಳನ್ನು ತೆರವುಗೊಳಿಸಿದರು.
ಇದರಿಂದ ಪೊಲೀಸರ ವಿರುದ್ಧ ಆಕ್ರೋಶ ಹೊರ ಹಾಕಿದ ಸಂತೋಷ್ ಹಾಗೂ ಇತರರು, ಬಿಸಿಲ ಮಧ್ಯೆಯೇ ಧರಣಿ ಮುಂದುವರಿಸಿದ್ದಾರೆ.
ಡಿವೈಎಸ್ಪಿ ಬಿ.ಆರ್.ಗೋಪಿ, ಗ್ರಾಮಾಂತರ ಠಾಣೆ ಸಿಪಿಐ ಅರುಣ್ ಕುಮಾರ್, ನಗರ ಪಿಎಸ್ಐ ದಿಲೀಪ್ ಹಾಗೂ ಸಿಬ್ಬಂದಿ ಪರಿಸ್ಥಿತಿ ಕೈ ಮೀರದಂತೆ ನೋಡಿಕೊಂಡರು.
ಈ ವೇಳೆ ಮಾತನಾಡಿದ ಸಂತೋಷ್, ತಾಲ್ಲೂಕಿನಲ್ಲಿ ಬಡ ಜನರಿಗೆ ಸ್ವಾತಂತ್ರ್ಯ ಇಲ್ಲದಂತಾಗಿದೆ. ಸಣ್ಣಪುಟ್ಟ ಅಸಮಾಧಾನ ಹೊರ ಹಾಕಿದವರ ಮೇಲೆ ದಲಿತ ದೌರ್ಜನ್ಯ ಪ್ರಕರಣ ದಾಖಲು ಮಾಡಲಾಗುತ್ತಿದೆ. ರಾಜಕೀಯ ಒತ್ತಡದಿಂದ ಕೇಸು ದಾಖಲಿಸಿ ಪೊಲೀಸರ ತೊಂದರೆ ನೀಡುತ್ತಿದ್ದಾರೆ. ಇದು ನಿಲ್ಲಬೇಕು, ಅಲ್ಲಿವರೆಗೂ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಸಿದರು.
ಪೊಲೀಸರು ನನ್ನನ್ನು ಬಂಧಿಸಿ ಜೈಲಿಗೆ ಹಾಕಿದರೂ ಹೋರಾಟ ನಿಲ್ಲಿಸುವುದಿಲ್ಲ ಎಂದರು.
ಪ್ರತಿಭಟನೆಯಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಗಿರೀಶ್ ಉಮೇಶ್ ಬೋಜನಾಯ್ಕ ಜಯರಾಮು, ರಮೇಶ್ ನಾಯ್ಡು, ಶಿವನ್ ರಾಜ್, ಚಿದಾನಂದ, ರಘು,ಹಾಗೂ ಇತರರಿದ್ದರು.

Leave a Reply

Your email address will not be published. Required fields are marked *