ಸಕಲೇಶಪುರ: ಸಾಮಾನ್ಯವಾಗಿ ಎರಡು-ಮೂರು ವರ್ಷದ ಮಕ್ಕಳು “ಅಪ್ಪ”, “ಅಮ್ಮ” ಎಂದು ತೊದಲು ಮಾತಿನಲ್ಲಿ ಕರೆಯುವ ವಯಸ್ಸಿನಲ್ಲಿ, ಪಟ್ಟಣದ ಪುಟ್ಟ ಬಾಲಕಿ ಮರಿಯಮ್ ಮೀಮ್ ತೌಸೀಫ್ ತನ್ನ ಅದ್ಭುತ ಜ್ಞಾಪಕಶಕ್ತಿಯಿಂದ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಗಳಿಸಿ ಎಲ್ಲರ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ.
ಕೇವಲ ಒಂದು ವರ್ಷ ಎಂಟು ತಿಂಗಳ ವಯಸ್ಸಿನ ಈ ಬಾಲಕಿ, ತನ್ನ ವಯಸ್ಸಿಗೆ ಮೀರಿದ ಬುದ್ಧಿವಂತಿಕೆಯನ್ನು ತೋರಿಸಿ ಎಲ್ಲರನ್ನೂ ಆಶ್ಚರ್ಯಗೊಳಿಸಿದ್ದಾಳೆ. ಪಟ್ಟಣದ ಮಹೇಶ್ವರಿ ನಗರದ ತೌಸೀಫ್ ಮತ್ತು ಹಲೀಮಾ ಮಶ್ವತ್ ದಂಪತಿಯ ಪುತ್ರಿಯಾದ ಮರಿಯಮ್ ಮೀಮ್, ತೊದಲು ಮಾತಿನಲ್ಲೇ ಚುರುಕಾಗಿ ಉತ್ತರಿಸಿ, ತನ್ನ ಪಾಠವನ್ನು ನಿಖರವಾಗಿ ಹೇಳುವ ಸಾಮರ್ಥ್ಯ ಹೊಂದಿದ್ದಾಳೆ.
ಮರಿಯಮ್ ಮೀಮ್ ತೌಸೀಫ್ 10 ರಾಷ್ಟ್ರಗಳ ಧ್ವಜಗಳನ್ನು ಗುರುತಿಸಿ ಹೆಸರಿಸಬಲ್ಲಳು. ಇದರ ಜೊತೆಗೆ, 13 ಪ್ರಾಣಿಗಳ ಹೆಸರು, 16 ಪಕ್ಷಿಗಳ ಹೆಸರು, 9 ಹೂವುಗಳ ಹೆಸರು, 5 ವಾಹನಗಳ ಹೆಸರು, 13 ದೇಹದ ಅಂಗಾಂಗಗಳ ಹೆಸರು, 16 ತರಕಾರಿಗಳ ಹೆಸರು ಮತ್ತು 14 ಹಣ್ಣುಗಳ ಹೆಸರನ್ನು ನಿಖರವಾಗಿ ನೆನಪಿಟ್ಟುಕೊಳ್ಳುವ ಅಪರೂಪದ ಸಾಮರ್ಥ್ಯವನ್ನು ತೋರಿಸಿದ್ದಾಳೆ.
ಇಷ್ಟಕ್ಕೇ ನಿಲ್ಲದೆ, ಅವಳು 10 ವಿವಿಧ ವಸ್ತುಗಳ ಹೆಸರನ್ನು ಗುರುತಿಸಬಲ್ಲಳು, ಇಂಗ್ಲಿಷ್ ಅಕ್ಷರಮಾಲೆಯ ಪ್ರತಿ ಅಕ್ಷರಕ್ಕೆ ಸಂಬಂಧಿಸಿದ ಪದಗಳನ್ನು ಹೇಳಬಲ್ಲಳು, ಒಂದರಿಂದ ಹತ್ತರವರಗೆ ಸಂಖ್ಯೆಗಳನ್ನು ಎಣಿಸಬಲ್ಲಳು ಮತ್ತು ಎರಡು ಇಂಗ್ಲಿಷ್ ನರ್ಸರಿ ಪದ್ಯಗಳನ್ನು ಸರಾಗವಾಗಿ ಪಾಠಿಸಬಲ್ಲಳು.
ಅವಳ ತೊದಲು ನುಡಿಯಲ್ಲೇ ಹರಿಯುವ ಚುರುಕಾದ ಮಾತು, ತೀಕ್ಷ್ಣ ಬುದ್ಧಿಶಕ್ತಿ ಮತ್ತು ಅದ್ಭುತ ಜ್ಞಾಪಕಶಕ್ತಿಯಿಂದ ಎಲ್ಲರೂ ನಿಬ್ಬೆರಗಾಗಿದ್ದಾರೆ. ಇಷ್ಟೊಂದು ಕಿರಿಯ ವಯಸ್ಸಿನಲ್ಲೇ ರಾಷ್ಟ್ರಮಟ್ಟದ ಸಾಧನೆ ಮಾಡಿರುವ ಮರಿಯಮ್ ಮೀಮ್ ತೌಸೀಫ್ ಅವರನ್ನು ನೆರೆಹೊರೆಯವರು, ಬಂಧು-ಬಳಗ ಮತ್ತು ಶಿಕ್ಷಣಪ್ರೇಮಿಗಳು ಮೆಚ್ಚಿ ಅಭಿನಂದಿಸಿದ್ದಾರೆ.
ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ತಂಡವು ಮರಿಯಮ್ ಮೀಮ್ ಅವರ ಈ ವಿಶಿಷ್ಟ ಸಾಮರ್ಥ್ಯವನ್ನು ಗುರುತಿಸಿ ‘ಅಚೀವರ್’ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.