ಹಾಸನ: ಗಣ್ಯರು, ಅತಿ ಗಣ್ಯರು ನಿಗದಿತ ಅವಧಿಯಲ್ಲಿ ಬಂದು ಹಾಸನಾಂಬ ದರ್ಶನ ಪಡೆಯಬೇಕು. ಇಲ್ಲವಾದರೆ ಅಂತಹವರಿಗೆ ಅವಕಾಶ ಕಲ್ಪಿಸುವುದಿಲ್ಲವೆಂದು ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಗೋಲ್ಡ್ ಕಾರ್ಡ್ ಜೊತೆಗೆ ಬರುವ ಭಕ್ತರಿಗೆ ಬೆಳಿಗ್ಗೆ 7 ರಿಂದ 10 ಹಾಗೂ 10.30ರಿಂದ ಮಧ್ಯಾಹ್ನ 12.30ರ ವರೆಗೆ ಅವಕಾಶವಿರುತ್ತದೆ. ಸಾಮಾನ್ಯ ಭಕ್ತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದರು.
ಜಾತ್ರಾ ಸಿದ್ಧತೆಗಳು ಈಗಾಗಲೇ ಪೂರ್ಣಗೊಂಡಿದ್ದು, ಭಕ್ತರ ಸುಗಮ ದರ್ಶನಕ್ಕಾಗಿ ವಿವಿಧ ಕ್ಯೂ ವ್ಯವಸ್ಥೆ ಮಾಡಲಾಗಿದೆ. ಸಾಮಾನ್ಯ ದರ್ಶನಕ್ಕೆ ಒಂದು ಕ್ಯೂ, ಟಿಕೆಟ್ ಖರೀದಿಸಿದ ಭಕ್ತರಿಗೆ ಎರಡು ಕ್ಯೂ ಮತ್ತು ಶಿಷ್ಟಾಚಾರ ದರ್ಶನಕ್ಕಾಗಿ ಒಂದು ಕ್ಯೂ ವ್ಯವಸ್ಥೆ ರೂಪಿಸಲಾಗಿದೆ.
ಗೋಲ್ಡ್ ಕಾರ್ಡ್ ಪಡೆದ ಭಕ್ತರಿಗೆ ಬೆಳಿಗ್ಗೆ 7.30ರಿಂದ 10 ಗಂಟೆಯವರೆಗೆ, ವಿಐಪಿಗಳಿಗೆ ಬೆಳಿಗ್ಗೆ 10.30ರಿಂದ 12.30ರವರೆಗೆ ದರ್ಶನ ಸಮಯ ನಿಗದಿ ಮಾಡಲಾಗಿದೆ. ಐದು–ಆರು ಗಣ್ಯರಿಗೆ ಮಾತ್ರ ಶಿಷ್ಟಾಚಾರ ಅನ್ವಯವಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಜಾತ್ರಾ ಅವಧಿಯಲ್ಲಿ ಕುಡಿಯುವ ನೀರು, ಮಜ್ಜಿಗೆ, ಶೌಚಾಲಯ ಸೇರಿದಂತೆ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಒಟ್ಟು 120 ಶೌಚಾಲಯಗಳನ್ನು ನಿರ್ಮಿಸಿ, ಪ್ರತಿಯೊಂದರ ನಿರ್ವಹಣೆಗೆ ಒಬ್ಬ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಆರೋಗ್ಯ ಇಲಾಖೆ, ಅಗ್ನಿಶಾಮಕ ದಳ ಮತ್ತು ಪೊಲೀಸ್ ಇಲಾಖೆ ಸೇರಿದಂತೆ ಎಲ್ಲಾ ಇಲಾಖೆಗಳು ಸಹಕಾರ ನೀಡಲಿವೆ.
ದೇವಸ್ಥಾನದ ಸುತ್ತಲೂ ಪಾದರಕ್ಷೆ ಬಿಡಲು ಅವಕಾಶವಿಲ್ಲ. ಸಾರಿಗೆ ಮತ್ತು ರೈಲು ನಿಲ್ದಾಣಗಳಲ್ಲಿ ಸಹ ಭಕ್ತರ ಅನುಕೂಲಕ್ಕಾಗಿ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಆನ್‌ಲೈನ್ ಬುಕ್ಕಿಂಗ್, ವಾಟ್ಸಪ್ ಚಾಟ್‌ಬಾಟ್, ಹಾಗೂ ಎಐ ತಂತ್ರಜ್ಞಾನದ ಮೂಲಕ ದೇವಿ ದರ್ಶನದ ಮಾಹಿತಿ ಪಡೆಯುವ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ಜಾತ್ರಾ ಆಕರ್ಷಣೆಯಾಗಿ ವಸ್ತು ಪ್ರದರ್ಶನ, ಡಾಗ್ ಶೋ, ಪಾಕ ಸ್ಪರ್ಧೆ, ಹೆಲಿ ಟೂರಿಸಂ, ಮತ್ತು ಫಲಪುಷ್ಪ ಪ್ರದರ್ಶನವನ್ನು ಆಯೋಜಿಸಲಾಗಿದೆ. ಒಟ್ಟು 12 ಪ್ರವಾಸಿ ಪ್ಯಾಕೇಜ್‌ಗಳು ಸಿದ್ಧಗೊಂಡಿವೆ ಎಂದು ಹೇಳಿದರು.
ವಿಐಪಿಗಳ ಜೊತೆ ಬರುವವರಿಗೆ ನಂಬರ್ ವ್ಯವಸ್ಥೆ ಜಾರಿಗೆ ತಂದಿದ್ದು, ವಿವಿಐಪಿಗಳು ನಾಲ್ಕು ಜನರನ್ನು ಮಾತ್ರ ಕರೆದುಕೊಂಡು ಬರಬಹುದೆಂದು ಸ್ಪಷ್ಟಪಡಿಸಲಾಗಿದೆ. ಸಚಿವರು ಹಾಗೂ ವಿಐಪಿಗಳು ತಮ್ಮ ವಾಹನಗಳನ್ನು ಐಬಿ ಆವರಣದಲ್ಲಿ ನಿಲ್ಲಿಸಿ, ಜಿಲ್ಲಾಡಳಿತ ಒದಗಿಸುವ ವಾಹನದ ಮೂಲಕ ದೇವಾಲಯಕ್ಕೆ ತೆರಳಬೇಕೆಂದು ಸೂಚಿಸಲಾಗಿದೆ.
ದೇವಾಲಯಕ್ಕೆ ಬರುವ ಎಲ್ಲ ಭಕ್ತರು ಸಾಂಪ್ರದಾಯಿಕ ಉಡುಗೆಯಲ್ಲಿಯೇ ಆಗಮಿಸಬೇಕೆಂದು ಜಿಲ್ಲಾಧಿಕಾರಿ ಕೋರಿದ್ದಾರೆ.

Leave a Reply

Your email address will not be published. Required fields are marked *