ಕೊಣನೂರು: ಕಳೆದ ರಾತ್ರಿ ಸುರಿದ ಧಾರಾಕಾರ ಮಳೆಯಿಂದ ಕೊಣನೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಸಂಜೆ 5 ಗಂಟೆಗೆ ಆರಂಭವಾದ ಮಳೆಯು ರಾತ್ರಿ 10.30ರ ವರೆಗೆ ನಿರಂತರವಾಗಿ ಸುರಿದು ಪಟ್ಟಣದ ಬೀದಿಗಳು, ಮನೆಗಳು ಹಾಗೂ ತೋಟಗಳು ನೀರಿನಲ್ಲಿ ಮುಳುಗುವಂತಾಯಿತು.
ದೀಪಾವಳಿ ಹಬ್ಬದ ಪ್ರಯುಕ್ತ ಬೇರೆ ಊರಿಗೆ ತೆರಳುತ್ತಿದ್ದ ದ್ವಿಚಕ್ರ ವಾಹನ ಸವಾರರು ಮಳೆಯಲ್ಲಿ ಪರದಾಡುವ ಪರಿಸ್ಥಿತಿ ಎದುರಿಸಿದರು. ಪಟ್ಟಣದ ಹಲವು ಅಂಗಡಿಗಳಿಗೆ, ಬಾರ್ ಗೆ ನೀರು ನುಗ್ಗಿದ್ದು ವ್ಯಾಪಾರಸ್ಥರು ಸಂಕಷ್ಟಕ್ಕೆ ಒಳಗಾದರು.
ರಸ್ತೆ ಕಾಮಗಾರಿಯ ಅವೈಜ್ಞಾನಿಕ ನಿರ್ವಹಣೆ ಸ್ಪಷ್ಟವಾಗಿ ಗೋಚರಿಸಿದ್ದು, ಮಳೆಯ ನೀರು ಸರಿಯಾಗಿ ಹೊರಹೋಗದ ಪರಿಣಾಮ ತೊರೆಯಾದಂತಾಯಿತು.
ಲಕ್ಕನಹಳ್ಳಿ ಗ್ರಾಮದ ರೈತ ರಾಘವೇಂದ್ರ ಅವರ ಎರಡು ಎಕರೆ ಅಡಿಕೆ ತೋಟ ಸಂಪೂರ್ಣ ಜಲಾವೃತಗೊಂಡಿದ್ದು, ಅಡಿಕೆ ಹಾಗೂ ಕೆಸವಿನ ಬೆಳೆ ನೀರು ಪಾಲಾಗಿದೆ. ಹಲವು ರೂಪಾಯಿ ವೆಚ್ಚ ಮಾಡಿ ಬೆಳೆದ ಬೆಳೆ ಹಾಳಾಗಿದ್ದರಿಂದ ರೈತರು ಕಂಗಾಲಾಗಿದ್ದಾರೆ.
ಮಳೆನೀರಿನಿಂದ ಮನೆಗಳಿಗೆ ಸಹ ನೀರು ನುಗ್ಗಿರುವ ಹಲವು ಘಟನೆಗಳು ವರದಿಯಾಗಿದ್ದು, ಗ್ರಾಮಸ್ಥರು ಅಧಿಕಾರಿಗಳಿಂದ ತುರ್ತು ಪರಿಹಾರ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
