ಹಾಸನ: ಎತ್ತಿನಹೊಳೆ ಯೋಜನೆ ಕಾಮಗಾರಿಗೆ ವಾಮ ಮಾರ್ಗದಲ್ಲಿ ಮರಳು ತರಿಸಿಕೊಳ್ಳಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿ ಲೋಕಾಯಕ್ತ ಅಧಿಕಾರಿಗಳು ಸಕಲೇಶಪುರದ ವಿಶ್ವೇಶ್ವರಯ್ಯ ಜಲ ನಿಗಮ ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಯಲು ಸೀಮೆ ಜಿಲ್ಲೆಗಳಿಗೆ ಕುಡಿಯುವ ನೀರು ಕಲ್ಪಿಸುವ ಉದ್ದೇಶದಿಂದ ಕೈಗೊಂಡಿರುವ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಅವ್ಯವಹಾರ ನಡೆದಿದೆಯೆಂದು ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ ಮಾಜಿ ರಾಜ್ಯ ಸಂಚಾಲಕ ಎಸ್. ಮೊಹಮದ್ ಸಾಧಿಕ್ 2018ರಲ್ಲಿ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು.
ಕಾಮಗಾರಿಗಾಗಿ ಮರಳು ಒದಗಿಸಲು 2017ರಲ್ಲೇ ಲೋಕೋಪಯೋಗಿ ಇಲಾಖೆ ಟೆಂಡರ್ ನಡೆಸಿತ್ತು. ಎತ್ತಿನಹೊಳೆ ಯೋಜನೆ ಅಧಿಕಾರಿಗಳು 5 ಪ್ಯಾಕೇಜ್‌ನಿಂದ 49 ಸಾವಿರ ಕ್ಯೂಬಿಕ್ ಮೀಟರ್ ಮರಳು ಬಳಕೆ ಮಾಡಿದ್ದಾರೆ. ಲೋಕೋಪಯೋಗಿ ಇಲಾಖೆಯ ಸುಪರ್ದಿಯಲ್ಲಿದ್ದ ಮರಳು ಬ್ಲಾಕ್‌ಗಳಿಂದ ಸುಮಾರು 45 ಸಾವಿರ ಕ್ಯೂ.ಮೀ. ಮರಳನ್ನು ಕಳ್ಳತನದಿಂದ ತಂದಿರುವುದು ತಿಳಿದುಬಂದಿದೆ. ಕೇವಲ 2400 ಕ್ಯೂಬಿಕ್ ಮೀ. ಮರಳಿಗೆ ಪರವಾನಗಿ ಪಡೆದು ಉಳಿದ ಮರಳನ್ನು ಎಲ್ಲಿಂದ ತಂದರೆಂಬುದರ ಕುರಿತು ತನಿಖೆಗೆ ಸಾದಿಕ್ ಆಗ್ರಹಿಸಿದ್ದರು.
ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮಾರ್ಗಸೂಚಿ ಪ್ರಕಾರ ಒಂದು ಪರ್ಮಿಟ್ ಇಲ್ಲದ ವಾಹನಗಳಿಗೆ 50 ಸಾವಿರದಿಂದ 1 ಲಕ್ಷ ರೂ. ವರೆಗೆ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ. ಸರ್ಕಾರಕ್ಕೆ 7 ರಿಂದ 8 ಕೋಟಿ ರೂ. ದಂಡ ಪಾವತಿಸಬೇಕಾಗುತ್ತದೆ. 2018ರಲ್ಲಿ ನಾನು ದೂರು ಕೊಟ್ಟಿದ್ದೆ. ಅಕ್ರಮದಲ್ಲಿ ಗುತ್ತಿಗೆದಾರರು ಹಾಗು ಇಂಜಿನಿಯರ್‌ಗಳು ಶಾಮೀಲಾಗಿದ್ದು ಎಲ್ಲರನ್ನು ತನಿಖೆಗೆ ಒಳಪಡಿಸಬೇಕೆಂದು ಒತ್ತಾಯಿಸಿದರು.
