ಹಾಸನ: ವಸತಿ ಯೋಜನೆಯ ಹಂಚಿಕೆಯಲ್ಲಿ ಅಕ್ರಮವಾಗಿದ್ದನ್ನು ನಾನು ಒಪ್ಪಿದ್ದೇನೆ. ಆದರೆ ನಾನೇ ಅಕ್ರಮದಲ್ಲಿ ಭಾಗಿಯಾಗಿದ್ದೇನೆಂದು ಆರೋಪಿಸುತ್ತಾ ಗೌರವಕ್ಕೆ ಧಕ್ಕೆ ತರುತ್ತಿರುವ ಜೆಡಿಎಸ್ ಮುಖಂಡ ಎನ್.ಆರ್. ಸಂತೋಷ್ ವಿರುದ್ಧ ಸೋಮವಾರ ಹೈಕೋರ್ಟ್ ನಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇನೆ ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಟಿಯಲ್ಲಿ ಶನಿವಾರ ಮಾತನಾಡಿ, ಸಂತೋಷ್ ಮೊದಲಿನಿಂದಲೂ ನನ್ನ ವಿರುದ್ಧ ರಾಗಿ ಕಳ್ಳ, ಮನೆ ಕಳ್ಳನೆಂದು ಆರೋಪ ಮಾಡುತ್ತಿದ್ದಾರೆ. ಆಧಾರವಿಲ್ಲದ ಆರೋಪಗಳನ್ನು ಸಹಿಸುವುದು ಸಾಧ್ಯವಿಲ್ಲ. ವಸತಿ ಯೋಜನೆಯಲ್ಲಿ ಅಕ್ರಮ ನಡೆದಿರುವುದು ನಿಜ. ಬಾಣಾವರ ಗ್ರಾಪಂ ಪಿಡಿಒ ಕುಮಾರಸ್ವಾಮಿ ವಿರುದ್ಧ ಎಫ್ ಐಆರ್ ದಾಖಲಾಗಿದ್ದು ಆತನನ್ನು ಸಸ್ಪೆಂಡ್ ಮಾಡಲಾಗುತ್ತದೆ. ಆದರೆ ಇದರಲ್ಲಿ ನನ್ನ ಹೆಸರು ತಳುಕು ಹಾಕುತ್ತಿರುವುದು ಏಕೆ ಎಂದು ಪ್ರಶ್ನಿಸಿದರು.
ವಿರೋಧ ಪಕ್ಷದವರು ಸತ್ಯ ವಿಷಯ ಆಧರಿಸಿ ಹೋರಾಟ ಮಾಡಬೇಕು. ಸಂತೋಷ್ ಇಲ್ಲಿ ಜೆಡಿಎಸ್ ಎನ್ನುತ್ತಾರೆ, ಮತ್ತೊಂದು ಕಡೆ ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಜೊತೆಗಿರುತ್ತಾರೆ. ತಮ್ಮ ನಿಲುವು ಏನೆಂಬುದನ್ನು ಮೊದಲು ಸ್ಪಷ್ಟಪಡಿಸಬೇಕೆಂದು ಆಗ್ರಹಿಸಿದರು.
ರಾಗಿ ಕಳ್ಳ ಎಂಬುದನ್ನು ಸಾಬೀತುಪಡಿಸಲು ಬಹಿರಂಗ ಸವಾಲು ಹಾಕಿದ್ದೆ. ಧರ್ಮಸ್ಥಳ ಮಂಜುನಾಥ ಸ್ವಾಮಿ ಮೇಲೆ ಆಣೆ ಪ್ರಮಾಣ ಮಾಡಿದ್ದೆ. ಆದರೆ ಸಂತೋಷ್ ಮಾಡಿದ್ದ ಆರೋಪ ಸಾಬೀತುಪಡಿಸಲಿಲ್ಲ. ಮಾನ ಮರ್ಯಾದೆ ಇಲ್ಲದೆ ಬಾಯಿಗೆ ಬಂದಂತೆ ಮಾತನಾಡುವುದೇ ಇವರ ಕೆಲಸವಾಗಿದೆ ಎಂದು ಚಾಟಿ ಬೀಸಿದರು.