ಅರಕಲಗೂಡು: ತಾಲ್ಲೂಕಿನ ದೊಡ್ಡಮಗ್ಗೆ ಹೋಬಳಿ ದುಮಿ ಕಾವಲು ಮಾರ್ಗವಾಗಿ ಇಬ್ಬಡಿ ಬೋರೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಮಳೆಯಿಂದ ಸಂಪೂರ್ಣವಾಗಿ ಕೆಸರುಮಯವಾಗಿದ್ದು, ನಿತ್ಯ ಸಂಚಾರ ಮಾಡುವ ಜನರು ನರಕಯಾತನೆ ಅನುಭವಿಸುವಂತಾಗಿದೆ.
ಕಳೆದ ಮೂರು ತಿಂಗಳಿಂದಲೂ ನಿರಂತರವಾಗಿ ಸುರಿಯುತ್ತಿರುವ ಮಳೆ ಪರಿಣಾಮ ಮೂರು ಕಿ.ಮೀ. ದೂರವಿರುವ ದುಮಿ ಬೋರೆ ಗ್ರಾಮಕ್ಕೆ ತೆರಳುವ ರಸ್ತೆ ಸಂಪೂರ್ಣ ಹಾಳಾದ ಕಾರಣ ಬೇರೆ ಊರುಗಳ ಗ್ರಾಮಸ್ಥರು ಸಹ ಗ್ರಾಮಕ್ಕೆ ಬರಲು ಹಿಂದೇಟು ಹಾಕುವಂತಾಗಿದೆ. ರಾತ್ರಿಯಾದರೆ ಹದಗೆಟ್ಟ ರಸ್ತೆ ಸಂಚಾರ ಯೋಗ್ಯವಲ್ಲದ ಕಾರಣ ಮನೆ ಬಿಟ್ಟು ಹೊರ ಹೋಗಲಾರದ ಪರಿಸ್ಥಿತಿ ಗ್ರಾಮಸ್ಥರಿಗೆ ಬಂದೊದಗಿದೆ.
ಈ ಹಾಳದ ರಸ್ತೆ ಮೂಲಕವೇ ದುಮಿ ಕಾವಲು, ಕೊರಟಿಕೆರೆ ಕಾವಲು ಮಾರ್ಗವಾಗಿ ಇಬ್ಬಡಿ ಗ್ರಾಮಕ್ಕೆ ಹಾದು ಹೋಗಿರುವ ಮುಖ್ಯ ರಸ್ತೆಯಂತೂ ಪೂರ್ತಿ ಹಾಳಾಗಿದೆ. ರಸ್ತೆಗೆ ಡಾಂಬರು ಹಾಕಿ ಯಾವುದೋ ಕಾಲವಾಗಿದೆ. ಮಳೆಗಾಲವಾದ ಕಾರಣ ಡಾಂಬರು ಕಿತ್ತು ಹದಗೆಟ್ಟು ಹೋಗಿರುವ ರಸ್ತೆಯಗಲಕ್ಕೂ ಗುಂಡಿ ಹೊಂಡಗಳು ಬಾಯ್ತೆರೆದಿದ್ದು ಅಪಾಯಕ್ಕೆ ಆಹ್ವಾನ ನೀಡುತ್ತಿವೆ.
ಇಡೀ ರಸ್ತೆ ಗುಂಡಿಮಯ: ಗುಂಡಿಗಳಿಂದ ಅಧ್ವಾನವಾಗಿರುವ ರಸ್ತೆಯಲ್ಲಿ ತಾಲೂಕು ಕೇಂದ್ರ ಅರಕಲಗೂಡು ಮಾರ್ಗವಾಗಿ ಪ್ರತಿನಿತ್ಯ ನೂರಾರು ವಾಹನಗಳು, ಕಾರುಗಳು, ದ್ವಿಚಕ್ರ ವಾಹನಗಳು ಸಂಚರಿಸುತ್ತವೆ. ಶಾಲಾ- ಕಾಲೇಜುಗಳಿಗೆ ನಿತ್ಯ ಓಡಾಡುವ ವಿದ್ಯಾರ್ಥಿಗಳ ಪಾಡು ಹೇಳತೀರದಾಗಿದೆ. ದುಮಿ ಕಾವಲು ಗ್ರಾಮದಿಂದ ಆರಂಭವಾಗುವ ಹೊಂಡಗಳು ರಸ್ತೆಯುದ್ದಕ್ಕೂ ಅಪಾಯಕಾರಿ ಸ್ಥಿತಿಯಲ್ಲಿವೆ. ಕೆಲವು ಕಡೆ ವಾಹನಗಳು ಹೊಂಡಕ್ಕಿಳಿಯಲಾಗದಷ್ಟು ಮಳೆ ಕೆಸರು ನೀರು ತುಂಬಿದೆ. ರಸ್ತೆ ಕೂಡ ಕಿರಿದಾಗಿದೆ. ಹಾಳಾದ ಕಿಷ್ಕಿಂದೆ ರಸ್ತೆಯಲ್ಲಿ ಎರಡು ವಾಹನಗಳು ಎದುರು ಬದುರಾದರೆ ಅಪಘಾತ ಕಟ್ಟಿಟ್ಟಬುತ್ತಿ. ಹೊಂಡಗಳಿಗೆ ಇಳಿದರೆ ವಾಹನ ಸವಾರರು ಮುಂದೆ ಚಲಿಸಲು ಹರಸಾಹಸ ಪಡುವಂತಾಗಿದೆ.
ಅಭಿವೃದ್ಧಿ ಮರೆತ ಅಧಿಕಾರಿ, ಜನಪ್ರತಿನಿಧಿ: ರೈತಾಪಿ ವರ್ಗದ ಜನರೇ ಹೆಚ್ಚಾಗಿ ಸಂಚರಿಸುವ ಈ ಮಾರ್ಗದ ರಸ್ತೆ ಅಭಿವೃದ್ಧಿ ಪಡಿಸುವುದನ್ನೇ ಅಧಿಕಾರಿಗಳು ಮತ್ತು ಜನಪ್ರತಿನಿಧಿ ಮರೆತಂತಿದೆ. ದೊಡ್ಡಮಗ್ಗೆ ಹೋಬಳಿ ವ್ಯಾಪ್ತಿಗೆ ಸೇರಿದ ಈ ಭಾಗದ ಅನೇಕ ಸಂಪರ್ಕ ರಸ್ತೆಗಳಲ್ಲಿ ಅಭಿವೃದ್ಧಿ ಕಾಣದಾಗಿವೆ. ಹೀಗಾಗಿ ತಾಲ್ಲೂಕು ಕೇಂದ್ರ ಅರಕಲಗೂಡು ಪಟ್ಟಣಕ್ಕೆ ತೆರಳಲು ಸಾಧ್ಯವಾಗದ ಸ್ಥಿತಿಗೆ ತಲುಪಿದೆ. ನಾಡಕಚೇರಿ, ರೈತ ಸಂಪರ್ಕ ಕೇಂದ್ರ ಮತ್ತಿತರ ಸರ್ಕಾರಿ ಕೆಲಸಗಳಿಗೆ ತೆರಳಲು ಹೋಬಳಿ ಕೇಂದ್ರವಾದ ದೊಡ್ಡಮಗ್ಗೆಗೆ ಹೋಗಲು ರಸ್ತೆ ಸಂಪರ್ಕ ಸರಿಯಿಲ್ಲದಾಗಿದೆ.
ಮೂಲ ಸೌಕರ್ಯ ವಂಚಿತ ಇಬ್ಬಡಿ ಬೋರೆ: ಒಂದೆಡೆ ಇಬ್ಬಡಿ ಮಾರ್ಗದ ರಸ್ತೆ ಹಾಳಾಗಿದ್ದರೆ ಮತ್ತೊಂದೆ ಇಬ್ಬಡಿ ಬೋರೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಗ್ರಾಮದಲ್ಲಿ 50ಕ್ಕೂ ಹೆಚ್ಚು ಮನೆಗಳಿದ್ದು ಮೂಲ ಸೌಕರ್ಯಗಳಲ್ಲಿ ಒಂದಾದ ಸಂಪರ್ಕ ರಸ್ತೆಯನ್ನೆ ಸರಿಪಡಿಸಿಲ್ಲ. ಇಬ್ಬಡಿ ಮುಖ್ಯ ರಸ್ತೆ ವರೆಗೆ ಸಂಪರ್ಕ ಕಲ್ಪಿಸುವ ರಸ್ತೆ ಮಳೆಗಾಲದಲ್ಲಿ ಕೆಸರು ಗದ್ದೆಯಾಗಿ ಮಾರ್ಪಟ್ಟಿದೆ. ಇಬ್ಬಡಿ ಬೋರೆ ವಾಸದ ಮನೆಗಳ ಮುಂಭಾಗದ ಓಣಿ ಹಾದಿಯಲ್ಲಿ ಕಾಲಿಡಲಾಗದೆ ಕೆಸರಿನ ಹೂಳಿನಿಂದ ಕೂಡಿದೆ. ಗ್ರಾಮಸ್ಥರು ಕೆಸರು ತುಣಿದು ಮನೆಯೊಳಗೆ ಹೋಗಬೇಕಾದ ದುಸ್ಥಿತಿ ಎದುರಾಗಿದೆ.
ಇಬ್ಬಡಿ ಬೋರೆ ಗ್ರಾಮಕ್ಕೆ ಮೂಲ ಸೌಕರ್ಯಗಳನ್ನೆ ಕಲ್ಪಿಸಿಲ್ಲ. ಸಂಪರ್ಕ ರಸ್ತೆ ಹಾಳಾಗಿದ್ದು ದುರಸ್ತಿ ಪಡಿಸಿಲ್ಲ. ಅರಕಲಗೂಡಿಗೆ ತೆರಳುವ ಇಬ್ಬಡಿ ಮುಖ್ಯ ರಸ್ತೆ ಕೂಡ ಡಾಂಬರು ಕಿತ್ತು ಹದಗೆಟ್ಟು ಹೋಗಿದೆ. ಆಸ್ಪತ್ರೆ, ಪಟ್ಟಣ ಪ್ರದೇಶಗಳಿಗೆ ತೆರಳಲು ವಯಸ್ಸಾದವರು, ಮಹಿಳೆಯರ ಓಡಾಟಕ್ಕೆ ತೊಂದರೆಯಾಗಿದೆ. ನಮ್ಮೂರಿನತ್ತ ಯಾರೂ ತಿರುಗಿ ನೋಡುತ್ತಿಲ್ಲ. ಮಳೆಗಾಲದಲ್ಲಿ ಕಚ್ಚಾ ರಸ್ತೆಯಂತಿದ್ದು ತಿರುಗಾಡುವುದೇ ಕಷ್ಟಕರವಾಗಿದೆ.
-ಕೃಷ್ಣೇಗೌಡ, ಇಬ್ಬಡಿ ಬೋರೆ ಗ್ರಾಮಸ್ಥ
ದುಮಿ ಕಾವಲು ಮಾರ್ಗವಾಗಿ ಇಬ್ಬಡಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಹದಗೆಟ್ಟಿದ್ದು ದುರಸ್ತಿ ಪಡಿಸಲು ಇಲಾಖೆಯಲ್ಲಿ ಯಾವುದೇ ಅನುದಾನವಿಲ್ಲ. ಸರ್ಕಾರ ಹಣ ಬಿಡುಗಡೆ ಮಾಡಿದ ನಂತರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು.
-ಶರತ್, ಜಿಪಂ ಸಹಾಯಕ ಇಂಜಿನಿಯರ್, ಅರಕಲಗೂಡು