ಹಾಸನ: ಅಪ್ರಾಪ್ತ ಬಾಲಕಿಯೊಬ್ಬಳನ್ನು ಪುಸಲಾಯಿಸಿ ಪ್ರೇಮದ ಬಲೆಗೆ ಬೀಳಿಸಿದ್ದ ಕಾಮುಕನೊಬ್ಬ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಆಕೆ ಮಗುವಿಗೆ ಜನ ನೀಡಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಖಾಸಗಿ ಶಾಲೆಯೊಂದರಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿರುವ ಬಾಲಕಿಯ ಮೇಲೆ ಅದೇ ಶಾಲೆಯ ವಾಹನ ಚಾಲಕನಾಗಿದ್ದ ರಂಜಿತ್ ಎಂಬಾತ 8 ತಿಂಗಳಿನಿಂದ ಲೈಂಗಿಕ ದೌರ್ಜನ್ಯವೆಸಗಿದ್ದು, ಆಕೆ ಹೆಣ್ಣು ಮಗುವಿಗೆ ಜನ ನೀಡಿದ್ದಾಳೆ. ಇನ್ನು ಬಾಲಕಿ ಮತ್ತು ಮಗುವನ್ನು ಕೆಲ ದಿನಗಳ ಆರೈಕೆ ಬಳಿಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಾಂತ್ವನ ಕೇಂದ್ರಕ್ಕೆ ಒಪ್ಪಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ:
ಚಾಕೋಲೆಟ್ ಕೊಡುವುದಾಗಿ ಕರೆದೊಯ್ದ ರಂಜಿತ್ ಹಲವು ತಿಂಗಳ ಹಿಂದೆ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ. ಈ ವಿಚಾರ ಯಾರಿಗಾದರೂ ಹೇಳಿದರೆ ಕೊಲೆ ಮಾಡುವ ಬೆದರಿಕೆಯನ್ನು ಹಾಕಿದ್ದ. ಹೀಗಾಗಿ ಬಾಲಕಿ ಸುಮನಿದ್ದಳು. ಆದರೆ, ಗರ್ಭಿಣಿಯಾದರೂ ಶಾಲಾ ಶಿಕ್ಷಕರಿಗೆ ಹಾಗು ಪೋಷಕರಿಗೆ ಸಂಶಯ ಬಾರದೆ ಇರುವುದು ಆಶ್ಚರ್ಯ ಮೂಡಿಸಿದೆ. ಮೂರು ದಿನಗಳ ಹಿಂದೆ ನಡೆದ ಕ್ರೀಡಾಕೂಟದಲ್ಲಿ ಬಾಲಕಿ ಓಟ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಹೊಟ್ಟೆ ನೋವು ಕಾಣಿಸಿಕೊಂಡಿದೆ. ತಕ್ಷಣವೇ ಖಾಸಗಿ ಆಸ್ಪತ್ರೆಗೆ ದಾಖಲಿಸಿದಾಗ ಗರ್ಭಿಣಿಯಾಗಿರುವ ವಿಚಾರ ಗೊತ್ತಾಗಿದೆ. ತಕ್ಷಣವೇ ಆಕೆಯನ್ನು ಹಿಮ್ಸೌಗೆ ದಾಖಲಿಸಲಾಯಿತು. ನಂತರ ಹೆಣ್ಣು ಮಗುವಿಗೆ ಜನ ನೀಡಿದ್ದಾಳೆ.
ಎಸ್‌ಎಸ್‌ಎಲ್‌ಸಿ ಓದಿರುವ ರಂಜಿತ್ ಬಿಎಸ್‌ಸಿ ಪದವಿಧರೆ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದು ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಆದರೂ ಶಾಲೆಯ ವಿದ್ಯಾರ್ಥಿನಿ ಮೇಲೆ ದೌರ್ಜನ್ಯ ಎಸಗಿದ್ದಾನೆ. ಅಪ್ರಾಪ್ತೆ ಆಸ್ಪತ್ರೆಗೆ ದಾಖಲಾಗಿರುವ ವಿಚಾರ ತಿಳಿದು ನಾಪತ್ತೆಯಾಗಿದ್ದಾನೆ. ಸ್ಥಳೀಯ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ.
