ಹಾಸನ: ಹಾಸನದಲ್ಲಿ ನಡೆದ ಜೆಡಿಎಸ್ ಪೂರ್ವಭಾವಿ ಸಭೆಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ರಾಜಕೀಯ ವಿಚಾರ ಕುರಿತು ಗಂಭೀರ ವಿಷಯಗಳ ಹೊರ ಹಾಕಿದರು.
ಮೋದಿಯವರೊಂದಿಗೆ ಸಂಪರ್ಕದಲ್ಲಿದ್ದ ಸಂದರ್ಭವನ್ನು ಸ್ಮರಿಸಿದ ದೇವೇಗೌಡರು, ಕೇರಳದ ನಮ್ಮ ಮಂತ್ರಿಗಳು ಮತ್ತು ನಾಯಕರು ಎಡಪಂಥೀಯ ಸರ್ಕಾರದಲ್ಲಿದ್ದೇವೆ, ಅನುಮತಿ ಕೊಡಿ ಎಂದು ನನ್ನ ಬಳಿ ಬಂದಿದ್ದರು. ಅವರಿಗೆ ಆತಂಕ ಆಗಬಾರದೆಂದು ನಾನು ಅನುಮತಿ ನೀಡಿದ್ದೆ. ಆದರೆ ಸ್ಥಳೀಯ ಸಂಸ್ಥೆಗಳ ಮಟ್ಟದಲ್ಲಿ ನಾವು ಸಹಕಾರ ನೀಡಿದ್ದೇವೆ ಎಂದು ಹೇಳಿದರು.
ಮಹಾರಾಷ್ಟ್ರದಲ್ಲಿ ಯಾವುದೇ ಹಣಕಾಸು ಸಹಕಾರ ಕೇಳದೆ ಐದು ಮಂದಿ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಗೆದ್ದಿರುವುದನ್ನು ಉಲ್ಲೇಖಿಸಿದ ಅವರು, ಜೆಡಿಎಸ್ ಒಂದು ಪ್ರಾದೇಶಿಕ ಪಕ್ಷವಾದರೂ ಜನರ ಶಕ್ತಿಯಿಂದಲೇ ಉಳಿದಿದೆ ಎಂದರು.
ಮುರಾರ್ಜಿ ದೇಸಾಯಿ ಪ್ರಧಾನಿಯಾಗಿದ್ದಾಗ ರಾಷ್ಟ್ರ ರಾಜಕಾರಣದ ಹೊಣೆಗಾರಿಕೆಯನ್ನು ತಮಗೆ ನೀಡಿದ್ದರು ಎಂದು ನೆನಪಿಸಿಕೊಂಡ ದೇವೇಗೌಡರು, ನಮ್ಮ ಪಕ್ಷ ಅನೇಕ ಬಾರಿ ಒಡೆದುಹೋದರೂ, ಇಂದು ಕರ್ನಾಟಕದಲ್ಲಿ ಹಾಗೂ ರಾಷ್ಟ್ರಮಟ್ಟದಲ್ಲಿ ಜೆಡಿಎಸ್‌ನ್ನು ಜೀವಂತವಾಗಿ ಉಳಿಸಿ ಬೆಳೆಸಿದವರು ಕಾರ್ಯಕರ್ತರೇ ಎಂದು ಶ್ಲಾಘಿಸಿದರು.
ಮುಂದಿನ ತಿಂಗಳು ಜ.24ರಂದು ಹಾಸನ ಜಿಲ್ಲೆಯಲ್ಲಿ ದೊಡ್ಡ ಸಭೆ ನಡೆಸಲಾಗುವುದಾಗಿ ಘೋಷಿಸಿದ ಅವರು, ಕಳೆದ ಎರಡೂವರೆ ವರ್ಷಗಳಲ್ಲಿ ಕಾಂಗ್ರೆಸ್ ನಾಯಕರು ಹಾಸನದಲ್ಲೇ ಎರಡು ಬೃಹತ್ ಸಮಾವೇಶ ನಡೆಸಿರುವುದನ್ನು ಪ್ರಶ್ನಿಸಿದರು.
ರಾಜಣ್ಣ ಹಾಗೂ ಕೃಷ್ಣ ಬೈರೇಗೌಡರ ಉಸ್ತುವಾರಿಯಲ್ಲಿ ತಲಾ ಒಂದು ಸಭೆ ನಡೆಸಿದ್ದಾರೆ. ರಾಜ್ಯದಲ್ಲಿ ಬೇರೆ ಜಿಲ್ಲೆಗಳು ಇಲ್ಲವೇ? ಎಂದು ಕಿಡಿಕಾರಿದರು.
ಹಾಸನ ಜಿಲ್ಲೆ ತಮ್ಮನ್ನು ಹುಟ್ಟಿಸಿ ಬೆಳೆಸಿದ ನೆಲ ಎಂದು ಹೇಳಿದ ದೇವೇಗೌಡರು, 1962ರಿಂದ 2025ರವರೆಗೆ ಈ ಜಿಲ್ಲೆಯ ಜನರು ತಮ್ಮನ್ನು ಬೆಳೆಸಿದ್ದಾರೆ ಎಂದರು.
ತಮ್ಮ ಜೀವನದ ಕುರಿತು ಭಾವನಾತ್ಮಕವಾಗಿ ಮಾತನಾಡಿದ ಅವರು, ನಮ್ಮಪ್ಪ ಸಾಮಾನ್ಯ ರೈತ. ನಾನು ಅವರ ಎರಡನೇ ಹೆಂಡತಿಯ ಮೊದಲ ಮಗ. ಮೊದಲ ಹೆಂಡತಿಯ ಮಕ್ಕಳು ಹಾಗೂ ಅವರೆಲ್ಲರೂ ಕಾಲವಾಗಿದ್ದರು. ನನ್ನ ಬದುಕಿನ ಬಗ್ಗೆ ನಮ್ಮಪ್ಪನಿಗೆ ಭಯ ಇತ್ತು ಎಂದು ಹೇಳಿದರು.
ತಮ್ಮ ಆರೋಗ್ಯಕ್ಕಾಗಿ ಕುಟುಂಬಸ್ಥರು ಮತ್ತು ಕಾರ್ಯಕರ್ತರು ನಡೆಸಿದ ಪ್ರಾರ್ಥನೆಗಳನ್ನು ಸ್ಮರಿಸಿದ ಅವರು, “ನನ್ನ ಅಳಿಯ ಡಾ.ಮಂಜುನಾಥ್ ನನ್ನನ್ನು ಉಳಿಸಲು ಬಹಳ ಪ್ರಯತ್ನ ಮಾಡಿದ್ದಾರೆ. ರೇವಣ್ಣ ನನ್ನ ಆಯಸ್ಸಿಗಾಗಿ ಎಷ್ಟೋ ಪೂಜೆ ಮಾಡಿಸಿದ್ದಾರೆ. ನೀವು ಎಲ್ಲರೂ ನನ್ನ ಆರೋಗ್ಯಕ್ಕಾಗಿ ಪ್ರಾರ್ಥನೆ ಮಾಡಿದ್ದೀರಿ, ಇದನ್ನು ನಾನು ಎಂದಿಗೂ ಮರೆಯುವುದಿಲ್ಲ” ಎಂದರು.
ಹೋರಾಟ ಮಾಡುವ ಶಕ್ತಿ ಕಾಲಲ್ಲಿ ಇಲ್ಲ, ಆದರೆ ತಲೆಯಲ್ಲಿ ಇದೆ. ಜಿಲ್ಲೆಯಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳ ಸ್ಥಾಪನೆಗೆ ರೇವಣ್ಣ ಕಾರಣ ಎಂದು ಬಹಿರಂಗವಾಗಿ ಹೇಳಿದರು.
ತಮ್ಮ ಪ್ರಧಾನಮಂತ್ರಿ ಆಗುವ ಸಂದರ್ಭವನ್ನು ನೆನಪಿಸಿಕೊಂಡ ಅವರು, ನಾನು ಅಕಸ್ಮಿಕವಾಗಿ ಪ್ರಧಾನಿ ಆದೆ. ನಾನು ಎಂದಿಗೂ ಆ ಸ್ಥಾನವನ್ನು ಕನಸು ಕಾಣಲಿಲ್ಲ. ಜೆ.ಹೆಚ್.ಪಟೇಲ್ ಅವರಿಗೆ ಹೆಚ್.ಕೆ.ಕುಮಾರಸ್ವಾಮಿಯನ್ನು ಮಂತ್ರಿ ಮಾಡು ಎಂದು ಹೇಳಿದ್ದೆ. ಆದರೆ ಅವರು ರೇವಣ್ಣನಿಗೆ ಕರೆ ಮಾಡಿ ಪ್ರಮಾಣವಚನ ಸ್ವೀಕರಿಸಲು ಹೇಳಿದರು ಎಂದು ವಿವರಿಸಿದರು.
ನಾನು ನನ್ನ ಜೀವನದಲ್ಲಿ ಎಂದೂ ಸುಳ್ಳು ಹೇಳಿಲ್ಲ ಎಂದು ಸ್ಪಷ್ಟಪಡಿಸಿದ ದೇವೇಗೌಡರು, ಪಕ್ಷದ ಬಲ ಹಾಗೂ ಹೋರಾಟದ ಶಕ್ತಿಯ ಬಗ್ಗೆ ಕಾರ್ಯಕರ್ತರಲ್ಲಿ ಆತ್ಮವಿಶ್ವಾಸ ತುಂಬಿದರು.
