ಹಾಸನ: ಸಹೋದರಿ ಜಮೀನು ವಂಚನೆ ಮಾಡಿದ್ದಾರೆ ಎಂದು ಮನನೊಂದು ಸಹೋದರನೊಬ್ಬ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ಹೆಚ್. ಭೈರಾಪುರದಲ್ಲಿ ನಡೆದಿದೆ.
ಮೃತನನ್ನು ರವಿ (42) ಎಂದು ಗುರುತಿಸಲಾಗಿದೆ. ಕುಟುಂಬದ ಆರೋಪದ ಪ್ರಕಾರ, ಮೃತ ರವಿ ಅವರ ತಂದೆಗೆ ಸೇರಿದ ಎಂಟು ಎಕರೆ ಜಮೀನಿನಲ್ಲಿ ಸಹೋದರಿ ಕಮಲ ಐದು ಎಕರೆ ಜಮೀನನ್ನು ತನ್ನ ಹೆಸರಿಗೆ ಖಾತೆ ಮಾಡಿಸಿಕೊಂಡಿದ್ದಾಳೆ. ಉಳಿದ ಮೂವರು ಸಹೋದರರಿಗೆ ತಲಾ ಒಂದೊಂದು ಎಕರೆ ಮಾತ್ರ ನೀಡಲಾಗಿದೆ ಎನ್ನಲಾಗಿದೆ.
ಜಮೀನು ಸಮನಾಗಿ ಹಂಚಿಕೆಯಾಗಬೇಕೆಂದು ರವಿ ಒತ್ತಾಯಿಸುತ್ತಿದ್ದರೂ, ಸಹೋದರಿ ಕಮಲ ನಿರಾಕರಿಸಿದ್ದಾಳೆ. ಇದೇ ವಿಚಾರವಾಗಿ ಕಮಲ ಮತ್ತು ರವಿ ನಡುವೆ ಪದೇ ಪದೇ ಜಗಳ ನಡೆಯುತ್ತಿದ್ದು, ಇದರಿಂದ ಮನನೊಂದ ರವಿ, ಕಮಲ ಖಾತೆ ಮಾಡಿಸಿಕೊಂಡಿರುವ ಜಮೀನಿನಲ್ಲೇ ಇರುವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಆರೋಪಿಸಲಾಗಿದೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣವು ದುದ್ದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬರಬೇಕಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
