ಸಕಲೇಶಪುರ: ಸಾಲು ಸಾಲು ರಜೆ ಹಾಗು ಹೊಸ ವರ್ಷಾರಂಭದ ಹಿನ್ನಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ವಾಹನ ದಟ್ಟಣೆ ಹೆಚ್ಚಾಗಿ ಪ್ರಯಾಣಿಕರು ಪರದಾಡುವಂತಾಯಿತು.
ರಜಾ ದಿನವಾದ ಭಾನುವಾರ 10 ಕಿ.ಮೀ.ಗೂ ಅಧಿಕ ದೂರದ ವರೆಗೆ ವಾಹನಗಳು ನಿಂತಿದ್ದವು. ದೊಡ್ಡತಪ್ಪಲು ಬಳಿ ಟ್ರಾಫಿಕ್ ಜಾಮ್ ಉಂಟಾದ್ದರಿಂದ ಸಾರ್ವಜನಿಕರು ತೊಂದರೆ ಅನುಭವಿಸಿದರು. ಮಂಜ್ರಾಬಾದ್ ಕೋಟೆ ಸಮೀಪ ಕಳೆದ ಮೂರು ವರ್ಷಗಳಿಂದ ಹೆದ್ದಾರಿ ಕಾಮಗಾರಿ ಸ್ಥಗಿತಗೊಂಡಿರುವುದೇ ಸಮಸ್ಯೆಗೆ ಕಾರಣವಾಗಿದೆ. ಪೊಲೀಸ್ ಇಲಾಖೆ ತಾತ್ಕಾಲಿಕವಾಗಿ ಸಂಚಾರ ನಿಯಂತ್ರಣ ಮಾಡುತ್ತಿದ್ದರೂ ಶಾಶ್ವತ ಪರಿಹಾರ ದೊರಕಿಲ್ಲ.
ರಾಜಧಾನಿ ಬೆಂಗಳೂರು ಹಾಗು ಬಂದರು ನಾಡು ಮಂಗಳೂರಿಗೆ ಸಂಪರ್ಕಿಸುವ ಪ್ರಮುಖ ರಸ್ತೆ ಇದಾಗಿದ್ದು ಐಟಿ ಉದ್ಯೋಗಿಗಳು ಕುಟುಂಬ ಸಮೇತ ಸಂಚರಿಸುವುದು ಸಾಮಾನ್ಯ. ಮಕ್ಕಳು, ಮಹಿಳೆಯರು ಗಂಟೆಗಟ್ಟಲೇ ರಸ್ತೆಯಲ್ಲೇ ಕಳೆದಿದ್ದು ಹೆದ್ದಾರಿ ಕಾಮಗಾರಿ ಬೇಗ ಮುಗಿಸುವಂತೆ ಒತ್ತಾಯಿಸಿದರು.
