ಸಕಲೇಶಪುರ: ತಾಲೂಕಿನ ಬೆಳಗೋಡು ಹೋಬಳಿಯ ಕಿರೆಹಳ್ಳಿ ಗ್ರಾಮದಲ್ಲಿ ಅಕ್ಟೋಬರ್ 7ರಂದು ಡಕಾಯಿತಿ ನಡೆಸಲು ಯತ್ನಿಸಿ ವಿಫಲರಾದ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ.
ಅ. 7ರ ರಾತ್ರಿ ಐದು ಮಂದಿಯ ಕಳ್ಳರ ಗುಂಪು, ಕಿರೆಹಳ್ಳಿ ಗ್ರಾಮದ ಸೋಹನ್ ಎಂಬುವವರ ಮನೆಯಲ್ಲಿ ಯಾರು ಇಲ್ಲವೆಂದು ಭಾವಿಸಿ ಡಕಾಯಿತಿ ನಡೆಸಲು ಯತ್ನಿಸಿದೆ. ಆದರೆ ಮನೆಯೊಳಗೆ ಜನರು ಇದ್ದುದನ್ನು ಗಮನಿಸಿದ ಕಳ್ಳರು ಅಲ್ಲಿಂದ ಪರಾರಿಯಾಗಿದ್ದಾರೆ. ಈ ದೃಶ್ಯ ಮನೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.
ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ತನಿಖೆ ಕೈಗೊಂಡ ಸಕಲೇಶಪುರ ಪೊಲೀಸರು, ಸಕಲೇಶಪುರದ ಮುಜೀಬ್, ಹಾಸನದ ಮುಬಾರಕ್ ಹಾಗೂ ಮೈಸೂರಿನ ಇರ್ಫಾನ್ ಅಕ್ಮಲ್ ಶಹಬಾಜ್ ಸೇರಿದಂತೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಜೈಲಿಗೆ ಕಳುಹಿಸಲಾಗಿದೆ.
ಕಾರ್ಯಾಚರಣೆಯಲ್ಲಿ ನಗರ ಠಾಣೆಯ ಸಬ್ ಇನ್ಸ್ಪೆಕ್ಟರ್ ಮಹೇಶ್, ಕ್ರೈಂ ಸಬ್ ಇನ್ಸ್ಪೆಕ್ಟರ್ ಕೃಷ್ಣಪ್ಪ ಹಾಗೂ ಸಿಬ್ಬಂದಿಗಳಾದ ರೇವಣ್ಣ, ಶ್ರೀಧರ್, ಸೋಮು ಮತ್ತು ಚಂದ್ರಕಾಂತ ಭಾಗವಹಿಸಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
