ಹಾಸನ: ವಸತಿ ಯೋಜನೆಯಡಿ ಲಾಗಿನ್ ದುರುಪಯೋಗ ಮಾಡಿಕೊಂಡು ಸುಮಾರು 27 ಲಕ್ಷ ರೂ.ಅಕ್ರಮ ಎಸಗಿದ್ದ ಆರೋಪದಡಿ ಅರಸೀಕೆರೆ ತಾಲ್ಲೂಕು ಬಾಣಾವರ ಗ್ರಾಪಂ ಅಭಿವೃದ್ಧಿ ಅಧಿಕಾರಿ ಎನ್. ಕುಮಾರಸ್ವಾಮಿ ಅವರನ್ನು ಅಮಾನತು ಮಾಡಲಾಗಿದೆ.
ಗ್ರಾಮ ಪಂಚಾಯಿತಿಯ 90 ಅನರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಯೋಜನೆಯ ಒಟ್ಟು 27 ಲಕ್ಷ ರೂ. ಮೊದಲ ಕಂತಿನ ಅನುದಾನವನ್ನು ಅರಸೀಕೆರೆಯ ತಾಲ್ಲೂಕು ವಸತಿ ನೋಡಲ್ ಅಧಿಕಾರಿ ಪಾಲಾಕ್ಷ ಹಾಗೂ ರಾಜೇಶ್ ಎಂ ಕೆ, ಜಿಲ್ಲಾ ನೋಡಲ್ ಅಧಿಕಾರಿ(ಹೆಚ್ಚುವರಿ ಪ್ರಭಾರ) ಅವರೊಂದಿಗೆ ಸೇರಿ ಅನರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆ ಮಾಡಿ ಕರ್ತವ್ಯ ಲೋಪವೆಸಗಿದ್ದರು.
ಈ ಸಂಬಂಧ ಅರಸೀಕೆರೆ ನಗರ ಪೋಲೀಸ್ ಠಾಣೆಯಲ್ಲಿ FIR ದಾಖಲಾಗಿತ್ತು. ಆ ಹಿನ್ನಲೆಯಲ್ಲಿ ಕುಮಾರಸ್ವಾಮಿ ಅವರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಸೇವೆಯಿಂದ ಅಮಾನತ್ತುಗೊಳಿಸಿ ಹಾಗೂ ಅರಸೀಕೆರೆಯ ತಾಲ್ಲೂಕು ವಸತಿ ನೋಡಲ್ ಅಧಿಕಾರಿ ಪಾಲಾಕ್ಷ ಅವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಆರ್. ಪೂರ್ಣಿಮಾ ಆದೇಶಿಸಿದ್ದಾರೆ.