ಹಾಸನ: ಧರ್ಮಸ್ಥಳ ಕ್ಷೇತ್ರದ ವಿರುದ್ಧ ಕೇಳಿಬಂದ ಆರೋಪಗಳ ಸಂಬಂಧ ತನಿಖೆಗಾಗಿ ರಾಜ್ಯ ಸರ್ಕಾರ ಎಸ್ ಐಟಿ ರಚನೆ ಮಾಡಿತಾದರೂ ಅದರಿಂದ ಯಾವ ಪ್ರಯೋಜನ ಆಗಲಿಲ್ಲ. ಹೀಗಾಗಿ ಎನ್ ಐಎ ತನಿಖೆ ಮೂಲಕ ಸತ್ಯ ಬಹಿರಂಗ ಪಡಿಸಬೇಕು ಎಂದು ಒತ್ತಾಯಿಸಿದರು.
ಜೆಡಿಎಸ್ ಕೈಗೊಂಡಿರುವ “ಸತ್ಯಯಾತ್ರೆ” ಯಲ್ಲಿ ಮಾತನಾಡಿ, ಧರ್ಮಸ್ಥಳದ ಆವರಣದಲ್ಲಿ ಕಳೆದ ಕೆಲವು ದಿನಗಳಿಂದ ಸಂಘಟಿತ ಪಿತೂರಿ, ಷಡ್ಯಂತ್ರ ನಡೆಯುತ್ತಿದೆ ಎಂದು ಅವರು ಆರೋಪಿಸಿ, “ಇದರಲ್ಲಿ ರಾಜಕೀಯ ಬೆರೆಸುವ ಪ್ರಶ್ನೆಯೇ ಇಲ್ಲ. ಇದು ಸಂಪೂರ್ಣ ಪಕ್ಷಾತೀತ. ನಾನು ಬಾಲ್ಯದಿಂದಲೂ ಮಂಜುನಾಥಸ್ವಾಮಿಯ ಭಕ್ತ. ಪ್ರತಿವರ್ಷವೂ ಧರ್ಮಸ್ಥಳಕ್ಕೆ ಆಗಮಿಸಿ ದೇವರ ದರ್ಶನ ಪಡೆಯುತ್ತೇನೆ” ಎಂದು ಹೇಳಿದರು.
ಸಾವಿರಾರು ಭಕ್ತಾಧಿಗಳು ಸ್ವಇಚ್ಛೆಯಿಂದ ಧರ್ಮಸ್ಥಳ ಯಾತ್ರೆಯಲ್ಲಿ ಭಾಗಿಯಾಗುತ್ತಿರುವುದನ್ನು ಅವರು ತಿಳಿಸಿದರು. “ಧರ್ಮಾಧಿಕಾರಿಗಳು ತಾಳ್ಮೆಯಿಂದ, ಹೃದಯ ವೈಶಾಲ್ಯತೆಯಿಂದ ಈ ಪರಿಸ್ಥಿತಿಗೆ ಪ್ರತಿಕ್ರಿಯಿಸಿದ್ದಾರೆ. ನಾವು ಅವರ ಬೆಂಬಲದಲ್ಲಿದ್ದೇವೆ. ಧರ್ಮವನ್ನು ರಕ್ಷಿಸುವುದು ಎಲ್ಲರ ಜವಾಬ್ದಾರಿ” ಎಂದು ನಿಖಿಲ್ ಸ್ಪಷ್ಟಪಡಿಸಿದರು.
ಈ ಪ್ರಕರಣದ ಹಿನ್ನಲೆಯಲ್ಲಿ ಸಮಾಜಘಾತುಕ ಶಕ್ತಿಗಳ ಕೈವಾಡವಿದ್ದು, ಅಂತರರಾಷ್ಟ್ರೀಯ ಹಣಕಾಸು ಬೆಂಬಲವೂ ಇದೆ ಎಂದು ಅವರು ಶಂಕೆ ವ್ಯಕ್ತಪಡಿಸಿದರು. “ಯೂಟ್ಯೂಬರ್‌ಗಳಿಗೆ ಉತ್ತೇಜನ ನೀಡಲಾಗುತ್ತಿದೆ. ದೊಡ್ಡ ಮಟ್ಟದ ಸಂಘಟನೆ ಇದರ ಹಿಂದೆ ಕಾರ್ಯನಿರ್ವಹಿಸುತ್ತಿದೆ. ಆದ್ದರಿಂದ ಈ ಪ್ರಕರಣವನ್ನು ಎನ್‌ಐಎ ತನಿಖಾ ಸಂಸ್ಥೆಗೆ ವಹಿಸಬೇಕು” ಎಂದು ನಿಖಿಲ್ ಕುಮಾರಸ್ವಾಮಿ ಬೇಡಿಕೆ ಇಟ್ಟರು.