ಹಾಸನ: ನಗರದ ಹೊರವಲಯ ಕೈಗಾರಿಕಾ ಪ್ರದೇಶದಲ್ಲಿ 790 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಮೆಗಾ ಡೇರಿ ಮುಂದಿನ ಫೆಬ್ರವರಿಯಲ್ಲಿ ಉದ್ಘಾಟನೆಯಾಗಲಿದೆ ಎಂದು ಮಾಜಿ ಸಚಿವ ಹಾಗೂ ಹಾಸನ ಹಾಲು ಒಕ್ಕೂಟದ ಅಧ್ಯಕ್ಷ ಎಚ್.ಡಿ. ರೇವಣ್ಣ ಹೇಳಿದರು.
ನಗರದ ಡೇರಿಯಲ್ಲಿ ಸೋಮವಾರ ನಡೆದ ಹಾಸನ ಹಾಲು ಒಕ್ಕೂಟದ 2024-25ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹಾಸನ ಹಾಲು ಒಕ್ಕಟದಿಂದ ನಗರದ ಕೆಐಎಡಿಬಿ ಯಲ್ಲಿ 790 ಕೋಟಿ ವೆಚ್ಚದಲ್ಲಿ ಮೆಗಾ ಡೇರಿ ನಿರ್ಮಾವಾಗುತ್ತಿದೆ. 2026 ಫೆಬ್ರವರಿ ಅಥವಾ ಮಾರ್ಚ್ ನಲ್ಲಿ ಮೆಗಾ ಡೇರಿ ಉದ್ಘಾಟನೆಯಾಗಲಿದೆ. ಉದ್ಘಾಟನಾ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಹ್ವಾನಿಸಲು ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದರು.
ಡೇರಿಯಲ್ಲಿ ಆಡಳಿತಾತ್ಮಕ ವೆಚ್ಚವನ್ನು ಶೇ. 2 ರಷ್ಟು ಬಳಸಿಕೊಳ್ಳಲು ಅವಕಾಶವಿದೆ. ಇಡೀ ರಾಜ್ಯದ 16 ಹಾಲು ಒಕ್ಕೂಟದಲ್ಲಿ ಹಾಸನ ಒಕ್ಕೂಟ ಕೇವಲ ಶೇ. 1.69 ರಷ್ಟ ಆಡಳಿತಾತ್ಮಕ ಖರ್ಚು ಮಾಡುತ್ತಿದೆ. ಬೆಂಗಳೂರು ಒಕ್ಕೂಟ ಶೇ. 4.49 ಇದೆ. ಇಡೀ ರಾಜ್ಯದಲ್ಲಿ ಹಾಸನ ಹಾಲು ಒಕ್ಕೂಟಕ್ಕೆ ಅತಿ ಕಡಿಮೆ ಆಡಳಿತಾತ್ಮಕ ವೆಚ್ಚ ಬಳಸುತ್ತಿದೆ ಎಂದರು.
ಪ್ರಸ್ತುತ ರಾಜ್ಯದ ಎಲ್ಲಾ ಹಾಲು ಒಕ್ಕೂಟಗಳು ನಷ್ಟದಲ್ಲಿವೆ. ಬೆಂಗಳೂರು 14.29 ಕೊಟಿ ರೂ., ಕೋಲಾರ 15.24, ಮೈಸೂರು 10 ಕೋಟಿ, ಮಂಡ್ಯ 15 ಕೋಟಿ, ಹಾಗೂ ಹಾಸನ 7 ಕೋಟಿ ನಷ್ಟದಲ್ಲಿದೆ.
ಹಾಸನ ರಾಜ್ಯದಲ್ಲಿ ಬೆಂಗಳೂರು ಹೊರತುಪಡಿಸಿ ಅತಿಹೆಚ್ಚು 14.30 ಲಕ್ಷ ಲೀ. ಹಾಲು ಉತ್ಪಾದನೆಯಾಗುತ್ತಿದೆ. 1.70 ಲಕ್ಷ ಲೀ. ಹಾಲನ್ನು ಭಾರತೀಯ ಸೇನೆಗೆ ಮಾರಾಟ ಮಾಡಲಾಗುತ್ತಿದೆ.
ಮುಂದಿನ ದಿನಗಳಲ್ಲಿ ಹಾಸನ ಹಾಲು ಒಕ್ಕೂಟ ಬೆಂಗಳೂರು ಒಕ್ಕೂಟವನ್ನು ಹಿಂದಿಕ್ಕಲಿದೆ ಎಂದು ಹೆಳೀದರು.
ಡೇರಿಯಲ್ಲಿ ಏಳೆಂಟು ವರ್ಷದಿಂದ ಯಾವುದೇ ನೇಮಕಾತಿ ನಡೆದಿಲ್ಲ. 240 ಹುದ್ದೆಗಳು ಖಾಲಿಇದೆ. ಇರುವ ಅಧಿಕಾರಿಗಳನ್ನೇ ಬಳಸಿಕೊಂಡು ಉತ್ತಮ ಆಡಳಿತ ನಡೆಸಲಾಗುತ್ತಿದೆ. 20 ಕೋಟಿ ವೆಚ್ಚದಲ್ಲಿ ಕೊಡಗಿನ ಡೇರಿಯನ್ನು ನವೀಕರಣ ಮಾಡಲಾಗುವುದು ಎಂದು ತಿಳಿಸಿದರು.
ರೇವಣ್ಣನ ಕಾಲ ಮುಗಿದಿದೆ ಎಂದು ಕೆಲವರು ತಿಳಿದುಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ರೇವಣ್ಣ ಏನು ಎಂಬುದನ್ನು ತೋರಿಸುತ್ತೇನೆ ಎಂದು ಗುಡುಗಿದರು.
1994 ರಲ್ಲಿ ನಾನು ಮೊದಲ ಬಾರಿಗೆ ಹಾಸನ ಹಾಲು ಒಕ್ಕೂಟದ ಅಧ್ಯಕ್ಷನಾದಾಗ ಒಕ್ಕೂಟವು ಕೇವಲ 4 ಕೋಟಿ ವಾರ್ಷಿಕ ವಹಿವಾಟು ನಡಯುತ್ತಿತ್ತು. ಇಂದು ವಾರ್ಷಿಕ 3 ಸಾವಿರ ಕೋಟಿ ವಹಿವಾಟು ನಡೆಸುತ್ತಿದೆ ಎಂದು ತಿಳಿಸಿದರು.
ಹಾಸನ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಮಹೇಶ್, ನಿರ್ದೇಶಕರಾದ ನಾರಾಯಣ್, ಸತೀಶ್, ಹೊನ್ನವಳ್ಳಿ, ನಾರಾಯಣ್, ಆಶಾ, ಸ್ವಾಮಿ, ಜಗದೀಶ್ ಮತ್ತಿತರರು ಇದ್ದರು.