ಹಾಸನ:  ಹಾಸನಾಂಬೆ ದೇವಿಯ ದರ್ಶನಕ್ಕೆ ಸ್ಥಳೀಯರಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಬೇಕೆಂಬ ಬೇಡಿಕೆ ಕೇಳಿಬಂದಿರುವ ಹಿನ್ನೆಲೆಯಲ್ಲಿ, ಹಾಸನಾಂಬೆ ದೇವಿ ಕೇವಲ ಹಾಸನಕ್ಕೆ ಸೀಮಿತವಾಗಿಲ್ಲ; ಇಡೀ ರಾಜ್ಯದ ಭಕ್ತರ ಆರಾಧ್ಯ ದೇವಿಯಾಗಿದ್ದಾಳೆ. ಆದ್ದರಿಂದ ಈ ವಿಚಾರದಲ್ಲಿ ಸಂಕುಚಿತ ಮನೋಭಾವನೆ ಬೇಡ, ಎಲ್ಲರೂ ಒಗ್ಗಟ್ಟಿನಿಂದ ಜಾತ್ರಾ ಮಹೋತ್ಸವವನ್ನು ಯಶಸ್ವಿಗೊಳಿಸೋಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ಮನವಿ ಮಾಡಿದರು.

ಹಾಸನದಲ್ಲಿ ಮಾತನಾಡಿದ ಅವರು, ಹಾಸನಾಂಬೆ ದೇವಿಯ ದರ್ಶನಕ್ಕೆ ಲಕ್ಷಾಂತರ ಭಕ್ತರು ಆಗಮಿಸಲಿದ್ದಾರೆ. ಹೀಗಾಗಿ ಸ್ಥಳೀಯರು ಎಂಬ ಪದವನ್ನು ಮುಂದಿಟ್ಟುಕೊಂಡು ಭಿನ್ನಾಭಿಪ್ರಾಯ ಸೃಷ್ಟಿಸುವುದು ಬೇಡ. ಎಲ್ಲರೂ ಒಟ್ಟಾಗಿ ನಾಡಹಬ್ಬವನ್ನು ಯಶಸ್ವಿಗೊಳಿಸಬೇಕು ಎಂದು ಹೇಳಿದರು.

ಇಸ್ಕಾನ್‌ನಿಂದ ಉಚಿತ ಪ್ರಸಾದ ವಿತರಣೆ

ಇಸ್ಕಾನ್ ಸಂಸ್ಥೆಯವರು ಭಕ್ತರಿಗೆ ಉಚಿತ ಪ್ರಸಾದ ವಿತರಣೆ ಮಾಡುತ್ತಿದ್ದಾರೆ. ಎರಡು ಲಾಡಿಗೆ ₹56.16 ಪೈಸೆಯಂತೆ ಇಸ್ಕಾನ್‌ನವರಿಗೆ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.

ಗರ್ಭಗುಡಿ ಬಾಗಿಲು ಪದೇಪದೇ ಮುಚ್ಚದಂತೆ ಮನವಿ

ಹಾಸನಾಂಬೆ ದೇವಾಲಯದ ಗರ್ಭಗುಡಿಯ ಬಾಗಿಲನ್ನು ಪದೇಪದೇ ಮುಚ್ಚುವುದನ್ನು ತಪ್ಪಿಸುವಂತೆ ಪ್ರಧಾನ ಅರ್ಚಕರಲ್ಲಿ ಮನವಿ ಮಾಡಲಾಗಿದೆ. ಒಬ್ಬರೇ ಅರ್ಚಕರು ನಿರಂತರವಾಗಿ ಕಾರ್ಯನಿರ್ವಹಿಸಿದರೆ ಸುಸ್ತಾಗುವ ಸಾಧ್ಯತೆಯಿರುವುದರಿಂದ, ಈ ಬಾರಿ ಹೆಚ್ಚಿನ ಅರ್ಚಕರನ್ನು ನಿಯೋಜಿಸುವಂತೆ ಕೋರಲಾಗಿದೆ ಎಂದು ಸಚಿವರು ತಿಳಿಸಿದರು.

ಈ ಮನವಿಗೆ ಪ್ರಧಾನ ಅರ್ಚಕರು ಸ್ಪಂದಿಸಿದ್ದು, ಹೆಚ್ಚಿನ ಅರ್ಚಕರನ್ನು ಬಳಸಿಕೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಅಲ್ಲದೆ, ಗಂಟೆಗಟ್ಟಲೆ ಗರ್ಭಗುಡಿಯ ಬಾಗಿಲು ಮುಚ್ಚುವುದಿಲ್ಲ ಎಂದು ತಿಳಿಸಿದ್ದಾರೆ. ಇದರಿಂದ ಭಕ್ತರು ದೀರ್ಘಕಾಲ ಸರತಿ ಸಾಲಿನಲ್ಲಿ ಕಾಯುವುದನ್ನು ತಪ್ಪಿಸಲು ಸಹಾಯವಾಗಲಿದೆ ಎಂಬ ವಿಶ್ವಾಸವನ್ನು ಸಚಿವರು ವ್ಯಕ್ತಪಡಿಸಿದರು.

ಪ್ರೋಟೋಕಾಲ್ ದರ್ಶನದ ಸಮಯ

ಸರ್ಕಾರದ ಅಧಿಕೃತ ಶಿಷ್ಟಾಚಾರದಡಿ (ಪ್ರೋಟೋಕಾಲ್) ಆಗಮಿಸುವ ಗಣ್ಯರಿಗೆ ಬೆಳಿಗ್ಗೆ 10.30ರಿಂದ ಮಧ್ಯಾಹ್ನ 12.30ರವರೆಗೆ ದರ್ಶನದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.

ಗೋಲ್ಡನ್ ಪಾಸ್ ಹೊಂದಿರುವವರಿಗೆ ಬೆಳಿಗ್ಗೆ 8ರಿಂದ 10ರವರೆಗೆ ದರ್ಶನಕ್ಕೆ ಅವಕಾಶವಿದೆ. ಒಂದು ಗೋಲ್ಡನ್ ಪಾಸ್ ಮೂಲಕ ಒಬ್ಬರಿಗೆ ಮಾತ್ರ ದರ್ಶನ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ರಾಜಕೀಯ ಮರೆತು ನಾಡಹಬ್ಬ ಯಶಸ್ವಿಗೊಳಿಸಿ

ಹಾಸನಾಂಬೆ ಜಾತ್ರಾ ಮಹೋತ್ಸವದಲ್ಲಿ ಪಕ್ಷಭೇದ ಮರೆತು ಎಲ್ಲ ಜನಪ್ರತಿನಿಧಿಗಳು ಭಾಗವಹಿಸಬೇಕು. ಸಲಹೆ, ಸೂಚನೆ ಹಾಗೂ ಸಹಕಾರ ನೀಡುವ ಮೂಲಕ ಉತ್ಸವವನ್ನು ಯಶಸ್ವಿಗೊಳಿಸಬೇಕು ಎಂದು ಸಚಿವರು ಮನವಿ ಮಾಡಿದರು.

“ಇದು ನಮ್ಮ ನಾಡಹಬ್ಬ. ಹಾಸನಾಂಬೆ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಬೇಕು. ಜಾತ್ರಾ ಮಹೋತ್ಸವ ಮುಗಿದ ಬಳಿಕ ರಾಜಕೀಯ ಮಾಡೋಣ. ಈಗ ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ” ಎಂದು ಕೆ.ಎಂ. ಶಿವಲಿಂಗೇಗೌಡ ಹೇಳಿದರು.

Leave a Reply

Your email address will not be published. Required fields are marked *