ಹಾಸನ: ದೇಶದಲ್ಲಿ ಬ್ರಿಟಿಷರು ಇಲ್ಲವಾದರೂ ಆಕ್ರಮಣಕಾರರ ಮನಸ್ಥಿತಿಯವರಿದ್ದಾರೆ, ದೇಶ ಉಳಿಯಬೇಕೆಂದರೆ ಹಿಂದುತ್ವ ಇರಬೇಕೆಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿದರು.
ಚನ್ನರಾಯಪಟ್ಟಣ ತಾಲ್ಲೂಕು ಹಿರೀಸಾವೆಯಲ್ಲಿ ಹಮ್ಮಿಕೊಂಡಿದ್ದ ಗಣೇಶ ವಿಸರ್ಜನಾ ಮಹೋತ್ಸವದಲ್ಲಿ ಮಾತನಾಡಿದ ಅವರು, ಹಿಂದುತ್ವದ ಭಾವ ಬೆಳೆಸದೆ ಇದ್ದರೆ ದೇಶ ಉಳಿಸಿಕೊಳ್ಳಲು ಆಗಲ್ಲ. ಈಗ ಬ್ರಿಟಿಷರು ಇಲ್ಲಾ, ಆದರೆ ಪರಕೀಯ ಆಕ್ರಮಣಕಾರರ ಮನಸ್ಥಿತಿ ಇನ್ನೂ ಇದೆ. ಅದು ಈ ಕಲೋನಿಯಲ್ ರೀತಿ, ಬೇರೆ ಬೇರೆ ರೀತಿಯಲ್ಲಿ ಅಕ್ರಮಣಕಾರರು ಇದ್ದೆ ಇದ್ದಾರೆ. ನಮ್ಮ ದೇಶಕ್ಕೆ ಸಾಂಸ್ಕೃತಿಕ, ಧಾರ್ಮಿಕ ಅಕ್ರಮಣಕಾರರಾಗಿ ಬಂದವರು ಅವರ ಪ್ರಭಾವ ಈಗಲೂ ಬೀರುತ್ತಿದ್ದಾರೆ. ಅವರದ್ದೇ ನಡೆಸುತ್ತಿದ್ದಾರೆ ಎಂದರು. ನಾವು ಶೇ. 85 ರಷ್ಟು ಹಿಂದುಗಳಿದ್ದರೂ ಮುಕ್ತವಾಗಿ ಗಣೇಶೋತ್ಸವ ಮಾಡುವುದು ಕಷ್ಟವಾಗುತ್ತಿದೆ.
ನಾವೇನಾದರೂ ಶೇ. 15, 20, 30ಗೆ ಇಳಿದರೆ ಶೇ. 50 ಸಮನಾದರೆ ಏನಾಗಬಹುದು. ಕಸುಬು, ವೃತ್ತಿ ಆಧಾರದಲ್ಲಿ ಜಾತಿ ಹುಟ್ಟಿದ್ದು. ಜಾತಿಗೆ ಮುಂಚೆ ಇದ್ದಿದ್ದು ವರ್ಣಾಶ್ರಮ. ಹಿಂದು ಸಮಾಜವನ್ನು ದುರ್ಬಲಗೊಳಿಸುವ ಷಡ್ಯಂತ್ರ ನಡೆದಿದೆ. ನಾವು ಒಟ್ಟಾಗದಿದ್ದರೆ ದೇಶ, ಧರ್ಮ, ನಾವು ಉಳಿಯಲ್ಲ. ಹೆಚ್ಚು ಅಂದರೆ ಇನ್ನೂ ಐವತ್ತು ವರ್ಷ ಉಳಿಯುತ್ತೇವೆ. ಏಕೆ ಅಂದರೆ 30, 40 ವರ್ಷ ಆದರೂ ಹೆಣ್ಣು ಕೊಡ್ತಿಲ್ಲ, ಮದುವೆ ಇಲ್ಲ. ಶ್ರೀಮಂತರು ಮದುವೆಯಾಗಿ ಹತ್ತು ವರ್ಷ ಆದರು ಮಕ್ಕಳು ಮಾಡಿಕೊಂಡಿಲ್ಲ. ಗಂಡು-ಹೆಂಡತಿ ಸರ್ಕಾರಿ ನೌಕರಿಯಲ್ಲಿ ಇದ್ದಾರೆ ಒಂದು ಮಗು ಮಾಡಿಕೊಂಡಿದ್ದಾರೆ. ಅವರಿಗೆ ಒಂದು ಮಗು ಸಾಕಾಗಬಹುದು, ದೇಶಕ್ಕೆ ಸಾಕಾಗಲ್ಲ. ಜನಸಂಖ್ಯೆ ಕಡಿಮೆ ಆದರೆ ದೇಶ, ಸಂಸ್ಕೃತಿ ಕಳೆದುಕೊಳ್ಳತ್ತೇವೆ ಎಂದು ಹೇಳಿದರು.
ಅದು ಕಳೆದುಕೊಳ್ಳಬಾರದು ಅಂದರೆ ಹಿಂದೂಗಳ ಸಂಖ್ಯೆ ಕುಸಿಯಬಾರದು. ನಮ್ಮ ಹಿಂದು ಜನಸಂಖ್ಯೆ ಕುಸಿದರೆ ನರಮೇಧ ನಡೆಯುತ್ತೆ. ಹಿಂದುಗಳ ಜನಸಂಖ್ಯೆ ಕುಸಿದರೆ ನಮ್ಮ ದೇವಾಲಯಗಳು ಉಳಿಯಲ್ಲ. ನಮ್ಮ ಊರು, ದೇವತೆಯನ್ನು ಸಹಿಸಿಕೊಳ್ತಾರೆ ಎನ್ನುವ ಭ್ರಮೆ ಬೇಡ ಎಂದರು.
