ಹಾಸನ: ನಗರದ ಸಾಲಗಾಮೆ ರಸ್ತೆಯಲ್ಲಿರುವ ಎಂಸಿಇ ಇಂಜಿನಿಯರಿಂಗ್ ಕಾಲೇಜಿನ ಹಾಸ್ಟೆಲ್‌ನಲ್ಲಿ ದರ್ಶನ್ (24) ಎಂಬ ವಿದ್ಯಾರ್ಥಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬುಧವಾರ ರಾತ್ರಿ ನಡೆದಿದೆ.

ಅಂತಿಮ ವರ್ಷದ ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ ದರ್ಶನ್, ಹಾಸನಾಂಬ ಬ್ಲಾಕ್‌ನ ರೂಂ ನಂ. H.A.159ರಲ್ಲಿ ಪ್ಲಾಸ್ಟಿಕ್ ವೈರ್ ಬಳಸಿ ಫ್ಯಾನ್‌ಗೆ ನೇಣುಬಿಗಿದುಕೊಂಡು ಜೀವಬಿಟ್ಟಿದ್ದಾನೆ.

ತುರುವೇಕೆರೆ ನಗರದ ನಂಜುಂಡೇಗೌಡ-ಮಮತಾ ದಂಪತಿ ಪುತ್ರನಾಗಿದ್ದ ದರ್ಶನ್ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಂತೆ ಕಾಲೇಜು ಹಾಸ್ಟೆಲ್‌ನಲ್ಲಿ ಆತಂಕ ವಾತಾವರಣ ನಿರ್ಮಾಣವಾಗಿದೆ.

ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಹಾಸ್ಟೆಲ್‌ ಆವರಣದಲ್ಲಿದ್ದ ವಿದ್ಯಾರ್ಥಿಗಳು ಭಯಭೀತರಾಗಿ ಹೊರಗೆ ಜಮಾಯಿಸಿದ್ದು, ಕಾಲೇಜಿನ ಮುಂಭಾಗದಲ್ಲಿ ನೂರಾರು ವಿದ್ಯಾರ್ಥಿಗಳು ಕೂಡಿಕೊಂಡರು.

ಸ್ಥಳಕ್ಕೆ ಎಎಸ್‌ಪಿ ವೆಂಕಟೇಶ್ ನಾಯ್ಡು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೆನ್‌ಷನ್‌ಮೊಹಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಹಿಮ್ಸ್ ಆಸ್ಪತ್ರೆಗೆ ಮೃತದೇಹವನ್ನು ರವಾನಿಸಲಾಗಿದೆ.

ಮಗನನ್ನು ಕಳೆದುಕೊಂಡ ಪೋಷಕರು ಶವಪರೀಕ್ಷಾ ಕೇಂದ್ರದ ಬಳಿ ಆಕ್ರಂದನ ವ್ಯಕ್ತಪಡಿಸಿದ್ದಾರೆ.

ಕಾಲೇಜು ಆವರಣ ಮತ್ತು ಹಾಸ್ಟೆಲ್‌ನಲ್ಲಿ ಎಚ್ಚರಿಕಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

 

Leave a Reply

Your email address will not be published. Required fields are marked *