ಹಾಸನ: ಹಾಸನ ನಗರದ ಅಧಿದೇವತೆ ಹಾಸನಾಂಬೆ ದೇವಿಯ ಗರ್ಭಗುಡಿ ಬಾಗಿಲು ಇಂದು ಮಧ್ಯಾಹ್ನ 12.21 ಕ್ಕೆ ಶಾಸ್ತ್ರೋಕ್ತವಾಗಿ ತೆರೆಯಲಾಯಿತು. ಪ್ರತಿವರ್ಷದಂತೆ ಅರಸು ವಂಶಸ್ಥ ನಂಜರಾಜೇ ಅರಸ್ ಅವರು ಗೊನೆಯುಳ್ಳ ಬಾಳೆಗೊನೆ ಕಡಿಯುವ ಸಂಪ್ರದಾಯ ನೆರವೇರಿಸಿದ ನಂತರ ಗರ್ಭಗುಡಿ ಬಾಗಿಲು ತೆರೆದು, ದೇವಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ, ಆದಿಚುಂಚನಗಿರಿ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಶಾಸಕ ಎಚ್.ಪಿ. ಸ್ವರೂಪ್‌ಪ್ರಕಾಶ್, ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಮದ್ ಸುಜೇತಾ ಸೇರಿದಂತೆ ಜಿಲ್ಲಾಡಳಿತದ ಅನೇಕ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ವರ್ಷಕ್ಕೊಮ್ಮೆ ಮಾತ್ರ ಭಕ್ತರಿಗೆ ದರ್ಶನ ನೀಡುವ ಹಾಸನಾಂಬೆ ದೇವಿ, ಈ ಬಾರಿ ಅಕ್ಟೋಬರ್ 23ರವರೆಗೆ ಭಕ್ತರಿಗೆ ದರ್ಶನ ಕರುಣಿಸಲಿದ್ದಾರೆ. ದೇವಾಲಯದ ಆವರಣದಲ್ಲಿ ಭಕ್ತರ ದಂಡು, ಭಕ್ತಿ ವಾತಾವರಣ ಮನೆ ಮಾಡಿದ್ದು, ಹಾಸನ ಸಂಪೂರ್ಣವಾಗಿ ಧಾರ್ಮಿಕ ರಂಗು ತಾಳಿದೆ.
ಗರ್ಭಗುಡಿ ಬಾಗಿಲು ತೆರೆಯುವ ವೇಳೆ ಕಳೆದ ವರ್ಷ ಹಚ್ಚಿದ್ದ ದೀಪ ಇನ್ನೂ ಉರಿಯುತ್ತಿದ್ದು, ಹೂವು ಬಾಡದೇ, ನೈವೇದ್ಯ ಹಳಸದೇ ಇರುವುದು ಈ ದೈವದ ಅತೀದೈವಿಕ ಶಕ್ತಿಗೆ ನಿದರ್ಶನವೆಂದು ಭಕ್ತರು ಭಾವಿಸಿದ್ದಾರೆ.