ಹಾಸನ: ಮದುವೆಗೆ ತೆರಳುತ್ತಿದ್ದ ಮಿನಿ ಬಸ್ ಪಲ್ಟಿಯಾಗಿ 10ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡು 20 ಕ್ಕೂ ಹೆಚ್ಚು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿರುವ ಘಟನೆ ಸಕಲೇಶಪುರ ತಾಲ್ಲೂಕಿನ ಬಿಸಿಲೆ ಘಾಟ್‌ನಲ್ಲಿ ನಡೆದಿದೆ.
ವನಗೂರು ಗ್ರಾಮದಿಂದ ಬಸಪ್ಪ ಎಂಬುವವರ ಕುಟುಂಬ ಸದಸ್ಯನ ಮದುವೆಗೆ KA-12-B-2579 ನಂಬರ್‌ನ ಮಿನಿ ಬಸ್‌ನಲ್ಲಿ ಮೂವತ್ತಕ್ಕೂ ಹೆಚ್ಚು ಮಂದಿ ತೆರಳುತ್ತಿದ್ದರು. ಬಿಸಿಲೆಘಾಟ್ ರಸ್ತೆಯ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿದೆ. ಗಾಯಾಳುಗಳೆಲ್ಲರನ್ನೂ ಸುಬ್ರಹ್ಮಣ್ಯ ಆಸ್ಪತ್ರೆಗೆ ರವಾನಿಸಲಾಗಿದ್ದು ಗಂಭೀರವಾಗಿ ಗಾಯಗೊಂಡಿರುವವರನ್ನು ಮಂಗಳೂರು ಆಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಯಸಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ರಸ್ತೆಯ ತಿರುವಿನಲ್ಲಿ ಕಳೆದ ಕೆಲವು ತಿಂಗಳುಗಳ ಹಿಂದೆ ಇದೇ ಜಾಗದಲ್ಲಿ ಬಸ್ ಪಲ್ಟಿಯಾಗಿತ್ತು. ತಡೆಗೋಡೆ ನಿರ್ಮಾಣ ಮಾಡದ ಕಾರಣ ಅಪಘಾತಗಳು ಸಂಭವಿಸುತ್ತವೆ ಎಂದು ಸಾರ್ವಜನಿಕರು ಆರೋಪಿಸಿದ್ದರು. ಈ ಹಿನ್ನಲೆಯಲ್ಲಿ ಲೋಕೋಪಯೋಗಿ ಇಲಾಖೆಯಿಂದ ತಡೆಗೋಡೆ ನಿರ್ಮಾಣ ಮಾಡಲು ಮುಂದಾಗಿದ್ದರು. ಈ ವೇಳೆ ಅರಣ್ಯ ಇಲಾಖೆ ಆರ್‌ಎಫ್‌ಓ ಕೃಷ್ಣ ಕಾಮಗಾರಿಗೆ ಅಡ್ಡಿಪಡಿಸಿದ್ದು ಕಾಮಗಾರಿ ಸ್ಥಗಿತಗೊಂಡಿತ್ತು. ಅರಣ್ಯ ಇಲಾಖೆ ಅಧಿಕಾರಿಗಳ ಬೇಜಾಬ್ದಾರಿಯೇ ಅಪಘಾತಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ತಡೆಗೋಡೆ ನಿರ್ಮಾಣಕ್ಕೆ ತೆಗೆದಿದ್ದ ಗುಂಡಿಯನ್ನು ಲೋಕೋಪಯೋಗಿ ಇಲಾಖೆ ಮುಚ್ಚದೆ ಇರುವುದು ಅಪಘಾತಕ್ಕೆ ಕಾರಣ ಎಂದು ಕಿಡಿಕಾರಿದ್ದಾರೆ.
