ಅರಕಲಗೂಡು: ತಾಲ್ಲೂಕಿನ ರಾಮನಾಥಪುರ ಹೋಬಳಿ ವಡ್ರಳ್ಳಿ ಗೇಟ್ ಬಳಿ ಬುಲೆರೋ ವಾಹನ ಮತ್ತು ದ್ವಿಚಕ್ರ ವಾಹನ ಮುಖಾಮುಖಿಯಾಗಿ ಡಿಕ್ಕಿ ಹೊಡೆದ ಪರಿಣಾಮ ಒಬ್ಬ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಸಂಭವಿಸಿದೆ.
ಮೃತರನ್ನು ಕೂಡ್ಲೂರು ಗ್ರಾಮದ ಸೀನು ಎಂದು ಗುರುತಿಸಲಾಗಿದೆ. ಗಾಯಾಳುಗಳು ವಡವಾನ ಹೊಸಳ್ಳಿ ಗ್ರಾಮದ ಶೇಖರ ಮತ್ತು ಮಹೇಶ್ ಎಂದು ತಿಳಿದುಬಂದಿದೆ.
ಮೂರು ಮಂದಿ ಸೋಂಪುರ ಗ್ರಾಮಕ್ಕೆ ತಿಥಿ ಕಾರ್ಯಕ್ಕೆ ತೆರಳಿ ಹಿಂದಿರುಗುವ ವೇಳೆ ಬೆಳಿಗ್ಗೆ ಸುಮಾರು 8.30ರ ಸುಮಾರಿಗೆ ವಡ್ರಳ್ಳಿ ಗೇಟ್ ಬಳಿ ಎದುರಿನಿಂದ ಬಂದ ಬುಲೆರೋ ವಾಹನ ಬೈಕ್‌ಗೆ ಡಿಕ್ಕಿ ಹೊಡೆದಿದೆ.
ಘಟನೆಯ ತೀವ್ರತೆಯಿಂದ ಕೂಡ್ಲೂರು ಸೀನು ಸ್ಥಳದಲ್ಲೇ ಮೃತಪಟ್ಟಿದ್ದು, ಶೇಖರ ಮತ್ತು ಮಹೇಶ್ ತೀವ್ರವಾಗಿ ಗಾಯಗೊಂಡಿದ್ದಾರೆ. ಮಹೇಶ್ ಅವರ ತಲೆ ಬುರುಡೆ ಓಪನ್ ಆಗಿರುವ ಕಾರಣ ಅವರನ್ನು ತಕ್ಷಣವೇ ಹಾಸನದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಕೊಣನೂರು ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.
