ಹಾಸನ: ನಗರದ ಜಿಲ್ಲಾಧಿಕಾರಿ ಕಚೇರಿಗೆ ಬಾಂಬ್ ಇಟ್ಟಿರುವುದಾಗಿ ಇ-ಮೇಲ್ ಮೂಲಕ ಬಂದ ಬೆದರಿಕೆ ಸಂದೇಶದಿಂದ ಸೋಮವಾರ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು.
ಜಿಲ್ಲಾಧಿಕಾರಿ ಕೆ.ಎಸ್.ಲತಾ ಕುಮಾರಿ ಅವರು ಸಂಜೆ ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಪೊಲೀಸರು ಬಾಂಬ್ ನಿಷ್ಕ್ರಿಯ ದಳದೊಂದಿಗೆ ಕಚೇರಿಗೆ ಆಗಮಿಸಿ ಪರಿಶೀಲನೆ ನಡೆಸಿ, ಡಿಸಿ ಕಚೇರಿ ಆವರಣ ಹಾಗೂ ಒಳಭಾಗದಲ್ಲಿ ಇಂಚಿಂಚೂ ಪರಿಶೀಲನೆ ನಡೆಸಿದರು.
ಡಿವೈಎಸ್‌ಪಿ ಗಂಗಾಧರಪ್ಪ ಅವರ ನೇತೃತ್ವದಲ್ಲಿ ಶ್ವಾನದಳ ಮತ್ತು ಬಾಂಬ್ ನಿಷ್ಕ್ರಿಯ ದಳದ ತಜ್ಞರು ಸ್ಥಳಕ್ಕೆ ಆಗಮಿಸಿ ಸಂಪೂರ್ಣ ತಪಾಸಣೆ ನಡೆಸಿದರು. ಕಚೇರಿ ಕಟ್ಟಡ, ಆವರಣ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಸೂಕ್ಷ್ಮವಾಗಿ ಪರಿಶೀಲನೆ ನಡೆಸಿದರೂ ಯಾವುದೇ ಸ್ಫೋಟಕ ವಸ್ತು ಪತ್ತೆಯಾಗಲಿಲ್ಲ. ಪರಿಶೀಲನೆ ಪೂರ್ಣಗೊಂಡ ಬಳಿಕ ಇದು ಹುಸಿ ಬಾಂಬ್ ಬೆದರಿಕೆ ಮೇಲ್ ಎಂಬುದು ದೃಢಪಟ್ಟಿದ್ದು, ಸಾರ್ವಜನಿಕರು ಹಾಗೂ ಸಿಬ್ಬಂದಿಯಲ್ಲಿ ಉಂಟಾಗಿದ್ದ ಆತಂಕ ನಿವಾರಣೆಯಾಯಿತು. ಮುನ್ನೆಚ್ಚರಿಕಾ ಕ್ರಮವಾಗಿ ಕೆಲಕಾಲ ಕಚೇರಿಯೊಳಗಿನ ಚಟುವಟಿಕೆಗಳನ್ನು ನಿಯಂತ್ರಿಸಲಾಗಿತ್ತು. ಹುಸಿ ಬೆದರಿಕೆ ಸಂದೇಶ ಕಳುಹಿಸಿದವರ ಪತ್ತೆಗೆ ಪೊಲೀಸರು ತನಿಖೆ ಕೈಗೊಂಡಿದ್ದು, ಇಂತಹ ಕೃತ್ಯಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಗಂಭೀರ ತನಿಖೆಗೆ ಡಿಸಿ ಆದೇಶ:
ಜಿಲ್ಲಾಧಿಕಾರಿ ಕಚೇರಿಗೆ ಬಾಂಬ್ ಬೆದರಿಕೆ ಕರೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಲತಾಕುಮಾರಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಜನರು ಯಾವುದೇ ರೀತಿಯ ಗಾಬರಿಗೆ ಒಳಗಾಗಬಾರದು. ಇದು ಒಂದು ಹುಸಿಬಾಂ ಬೆದರಿಕೆ ಆಗಿದೆ ಎಂದು ಸ್ಪಷ್ಟಪಡಿಸಿದರು.
ಡಿ.15ರಂದು ಜಿಲ್ಲಾಧಿಕಾರಿ ಕಚೇರಿಯ ಅಧಿಕೃತ ಡಿಸಿ ಇ-ಮೇಲ್ ವಿಳಾಸಕ್ಕೆ ‘ಆರ್ನಾ ಅಶ್ವಿನ್ ಶೇಖರ್’ ಎಂಬ ಹೆಸರಿನಲ್ಲಿ ಬಾಂಬ್ ಬೆದರಿಕೆ ಮೇಲ್ ಬಂದಿದೆ. ಈ ಮೇಲ್‌ನಲ್ಲಿ ಪಾಕಿಸ್ತಾನಿ ಐಎಸ್‌ಐ ಸೆಲ್ ಹಾಗೂ ತಮಿಳುನಾಡಿನ ಮಾಜಿ ಎಲ್‌ಟಿಟಿಇ ಸದಸ್ಯರು ಈ ಕೃತ್ಯಕ್ಕೆ ಸಿದ್ಧತೆ ನಡೆಸಿದ್ದಾರೆ ಎಂಬ ಉಲ್ಲೇಖವಿದೆ. ಮೇಲ್ ಬಂದ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಹಾಸನ ಎಸಿ ಅವರು ಅಧಿಕೃತವಾಗಿ ದೂರು ದಾಖಲಿಸಿದ್ದಾರೆ. ಈ ಸಂಬಂಧ ಜೆಎಂಎಫ್‌ಸಿ ನ್ಯಾಯಾಧೀಶರಿಗೂ ಮಾಹಿತಿ ನೀಡಲಾಗಿದೆ ಎಂದು ಡಿಸಿ ಲತಾಕುಮಾರಿ ತಿಳಿಸಿದರು.
ಪೊಲೀಸರು, ಶ್ವಾನದಳ ಹಾಗೂ ಬಾಂಬ್ ನಿಷ್ಕ್ರಿಯ ದಳದ ಸಹಕಾರದಿಂದ ಡಿಸಿ ಕಚೇರಿಯ ಮೂಲೆ ಮೂಲೆಯನ್ನೂ ಸೂಕ್ಷ್ಮವಾಗಿ ಪರಿಶೀಲನೆ ನಡೆಸಲಾಗಿದೆ. ಎಲ್ಲಾ ಕೊಠಡಿಗಳಲ್ಲಿದ್ದ ಅಧಿಕಾರಿಗಳನ್ನು ಹೊರಗೆ ಕಳುಹಿಸಿ ಮುನ್ನೆಚ್ಚರಿಕಾ ಕ್ರಮವಾಗಿ ಒಂದೇ ಕೊಠಡಿಯಲ್ಲಿ ಅಧಿಕಾರಿಗಳ ಸಭೆ ನಡೆಸಲಾಗಿದೆ. ಪರಿಶೀಲನೆಯ ಬಳಿಕ ಯಾವುದೇ ಅನುಮಾನಾಸ್ಪದ ವಸ್ತು ಪತ್ತೆಯಾಗಿಲ್ಲ ಎಂದು ಡಿಸಿ ಸ್ಪಷ್ಟಪಡಿಸಿದ್ದಾರೆ.
ಈ ರೀತಿಯ ಬೆದರಿಕೆ ಕರೆಗಳು ಹಾಸನ ಮಾತ್ರವಲ್ಲದೆ ಮಂಗಳೂರು, ಬೀದರ್ ಸೇರಿದಂತೆ ರಾಜ್ಯದ ಐದು ಜಿಲ್ಲೆಗಳಿಗೆ ಬಂದಿರುವ ಮಾಹಿತಿ ಇದೆ. ಮೊದಲಿಗೆ ಇದನ್ನು ಪ್ರಾಕ್ಸ್ ಎಂದುಕೊಂಡರೂ, ಸಾರ್ವಜನಿಕ ಸುರಕ್ಷತೆ ದೃಷ್ಟಿಯಿಂದ ನಿರ್ಲಕ್ಷ್ಯ ಮಾಡದೆ ಗಂಭೀರವಾಗಿ ಪರಿಗಣಿಸಲಾಗಿದೆ. ಮೇಲ್‌ನಲ್ಲಿ ಐದು ಬಾಂಬ್ ಸ್ಫೋಟಿಸುವುದಾಗಿ ಕನ್ನಡದಲ್ಲಿ ಉಲ್ಲೇಖವಿದ್ದರೂ, ಯಾವ ಸಮಯದಲ್ಲಿ ಅಥವಾ ಯಾವ ಸಂದರ್ಭದಲ್ಲಿ ಸ್ಪೋಟ ನಡೆಯಲಿದೆ ಎಂಬ ಸ್ಪಷ್ಟ ಮಾಹಿತಿ ನೀಡಿಲ್ಲ ಎಂದು ಅವರು ಹೇಳಿದರು.
ಮಧ್ಯರಾತ್ರಿ 12.50ರ ವೇಳೆಗೆ ಈ ಮೇಲ್ ಬಂದಿದ್ದು, ನಮಗೆ ಇಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಲಭ್ಯವಾಗಿದೆ. 2026ರ ಡಿಎಂಕೆ ಚುನಾವಣೆಯ ಗಮನ ಬೇರೆಡೆ ಸೆಳೆಯುವ ಉದ್ದೇಶದಿಂದ ಈ ರೀತಿಯ ಕೃತ್ಯ ನಡೆದಿರಬಹುದೆಂಬ ಮಾತುಗಳು ಕೇಳಿಬರುತ್ತಿದ್ದು, ಇದರ ಸತ್ಯಾಸತ್ಯತೆಯನ್ನು ಪತ್ತೆಹಚ್ಚಲು ಸಮಗ್ರ ತನಿಖೆ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
