ಹಾಸನ: ನಟ ರಾಕಿಂಗ್ ಸ್ಟಾರ್ ಯಶ್ ಅವರ ತಾಯಿ ಪುಷ್ಪಾ ಅವರ ವಿರುದ್ಧ ಸೈಟ್ ಒತ್ತುವರಿ ಆರೋಪಕ್ಕೆ ಸಂಬಂಧಿಸಿದ ಪ್ರಕರಣ ದಾಖಲಾಗಿದೆ.

ವೃದ್ಧೆ ಲಕ್ಷ್ಮಮ್ಮ ಅವರಿಗೆ ಸೇರಿದ ಸೈಟ್‌ನ್ನು ಅಕ್ರಮವಾಗಿ ಒತ್ತುವರಿ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಲಕ್ಷ್ಮಮ್ಮ ಅವರ ಸೈಟ್‌ಗೆ ಸಂಬಂಧಿಸಿದ ಜಿಪಿಎ ಹೋಲ್ಡರ್ ದೇವರಾಜ್ ಅವರು, ನ್ಯಾಯಾಲಯದ ಆದೇಶದಂತೆ ನಿನ್ನೆ ಬೆಳಗ್ಗೆ ಕಾಂಪೌಂಡ್ ಹಾಗೂ ಶೆಡ್ ಅನ್ನು ಜೆಸಿಬಿ ಬಳಸಿ ತೆರವುಗೊಳಿಸಿದ್ದರು. ಈ ವಿಚಾರಕ್ಕೆ ಸಂಬಂಧಿಸಿ ಪುಷ್ಪಾ ಅವರ ಪರವಾಗಿ ದುರ್ಗಾಪ್ರಸಾದ್ ಎಂಬುವವರು ಬಡಾವಣೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪುಷ್ಪಾ ಅವರು ಬೆಂಗಳೂರಿನಲ್ಲಿ ಇದ್ದು, ಅವರ ಸೂಚನೆಯಂತೆ ದೂರು ದಾಖಲಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ದುರ್ಗಾಪ್ರಸಾದ್ ಅವರು ಪುಷ್ಪಾ ಅವರ ಮನೆಯ ಕೆಲಸಗಾರರಾಗಿದ್ದಾರೆ.

ದೂರಿನಲ್ಲಿ, ಪುಷ್ಪಾ ಅವರಿಗೆ ಸೇರಿದ ಆಸ್ತಿಯಲ್ಲಿದ್ದ ಕಾಂಪೌಂಡ್ ಹಾಗೂ ಶೆಡ್ ಅನ್ನು ದೇವರಾಜ್ ಅವರು ಅಕ್ರಮವಾಗಿ ತೆರವು ಮಾಡಿದ್ದಾರೆ, ಇದನ್ನು ಪ್ರಶ್ನಿಸಿದಾಗ ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೆ, ಪುಷ್ಪಾ ಅವರಿಗೆ ಸೂಕ್ತ ಪೊಲೀಸ್ ರಕ್ಷಣೆ ನೀಡುವಂತೆ ಮನವಿ ಮಾಡಲಾಗಿದೆ.

ಇನ್ನು ದೇವರಾಜ್ ಅವರು, ಮೈಸೂರಿನಲ್ಲಿ ವಾಸವಾಗಿರುವ ಲಕ್ಷ್ಮಮ್ಮ ಅವರು ತಮಗೆ ಜಿಪಿಎ ನೀಡಿದ್ದು, ಅದರ ಆಧಾರದಲ್ಲಿ ನ್ಯಾಯಾಲಯದ ಆದೇಶದಂತೆ ಒತ್ತುವರಿ ತೆರವುಗೊಳಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಪುಷ್ಪಾ ಅವರ ಕಡೆಯವರು, ಈ ಆಸ್ತಿ ಗಿರೀಶ್ ಎಂಬುವವರಿಂದ ಪುಷ್ಪಾ ಅವರು ಕ್ರಯಕ್ಕೆ ಪಡೆದುಕೊಂಡಿರುವುದಾಗಿ ವಾದಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *