ಮಾಡಾಳು: ಗ್ರಾಮದ ನಿರಂಜನ ಪೀಠದ ಹಿರಿಯ ಗುರುಗಳಾದ ಲಿಂಗೈಕೈ ಶ್ರೀ ಚಂದ್ರಶೇಖರ ಸ್ವಾಮೀಜಿ ಅವರ 19ನೇ ವರ್ಷದ ಪುಣ್ಯ ಸಂಸ್ಮರಣೋತ್ಸವ ಹಾಗೂ 26ನೇ ಅರಿವಿನ ಜಾಗೃತಿ ಕಾರ್ಯಕ್ರಮ ಜ. 10 ರಂದು ಸಾಣೇಹಳ್ಳಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರ ಸಾನಿಧ್ಯದಲ್ಲಿ ಜರುಗಲಿದೆ ಎಂದು ಶ್ರೀ ರುದ್ರಮುನಿ ಸ್ವಾಮೀಜಿ ಮಂಗಳವಾರ ತಿಳಿಸಿದರು.
ಗ್ರಾಮದ ನಿರಂಜನ ಪೀಠದ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸ್ವಾಮೀಜಿ, ಪ್ರತಿ ವರ್ಷದ ಸಂಪ್ರದಾಯದಂತೆ ಹಾಗೂ ಭಕ್ತರ ಆಶಯದಂತೆ ನಡೆಯಲಿದೆ ಎಂದರು.
ಬೆಳಿಗ್ಗೆ ಕರ್ತೃ ಗದ್ದುಗೆಗೆ ರುದ್ರಾಭಿಷೇಕ ನಡೆಯಲಿದ್ದು 9.30ಕ್ಕೆ ಪುಷ್ಪಾಲಂಕೃತ ಪಲ್ಲಕ್ಕಿಯಲ್ಲಿ ಹಿರಿಯ ಗುರುಗಳ ಮತ್ತು ಜಗಜ್ಯೋತಿ ಬಸವೇಶ್ವರರ ಭಾವಚಿತ್ರ ಮೆರವಣಿಗೆ ಗ್ರಾಮದ ಬೀದಿಗಳಲ್ಲಿ ನಡೆಯಲಿದೆ ಎಂದರು.
ನೂತನ ವಿದ್ಯಾರ್ಥಿ ನಿಲಯ ಕಟ್ಟಡ ಉದ್ಘಾಟನೆಯನ್ನು ಕೆರಗೋಡಿ ರಂಗಾಪುರ ಕ್ಷೇತ್ರದ ಶ್ರೀ ಗುರುಪರ ದೇಶಿಕೇಂದ್ರ ಸ್ವಾಮೀಜಿ ನೆರವೇರಿಸಲಿದ್ದು ಸಮಾರಂಭದ ಅಧ್ಯಕ್ಷತೆಯನ್ನು ನಿರಂಜನಪೀಠದ ರುದ್ರಮುನಿ ಸ್ವಾಮೀಜಿ ವಹಿಸುವರು ಎಂದರು.
ಸಭಾ ಕಾರ್ಯಕ್ರಮದ ಉದ್ಘಾಟನೆ ಪಾಂಡುಮಟ್ಟಿ ವಿರಕ್ತ ಮಠದ ಶ್ರೀ ಗುರುಬಸವ ಸ್ವಾಮೀಜಿ ನೆರವೇರಿಸುವರು.
ಸಂಸದ ಶ್ರೇಯಸ್ ಪಟೇಲ್, ಶಾಸಕರಾದ ಕೆ.ಎಂ.ಶಿವಂಗೇಗೌಡ, ಹೆಚ್.ಡಿ. ರೇವಣ್ಣ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.
