ಹೊಳೆನರಸೀಪುರ: ಪಟ್ಟಣದಲ್ಲಿ ನೂತನ ತಾಲ್ಲೂಕು ಪಂಚಾಯಿತಿ ಕಟ್ಟಡ ಕಾಮಗಾರಿಗೆ ಹೆಚ್ಚುವರಿ 2.40 ಕೋಟಿ ರೂ. ಅನುದಾನ ಬಿಡುಗಡೆಗೆ ರಾಜ್ಯ ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ಸಮ್ಮತಿ ಸೂಚಿಸಿದ್ದು, ಸಂಸದ ಶ್ರೇಯಸ್ ಪಟೇಲ್ ಅವರ ಪ್ರಯತ್ನಕ್ಕೆ ಫಲ ಸಿಕ್ಕಿದೆ.
2021-22ರ ಅವಧಿಯಲ್ಲಿ ಕಾಮಗಾರಿಗೆ 9.90 ಕೋಟಿ ರೂ. ಬಿಡುಗಡೆಯಾಗಿತ್ತು. ಆದರೆ ಅನುದಾನ ಕೊರತೆಯಿಂದ ಕಾಮಗಾರಿ ಕುಂಟುತ್ತಾ ಸಾಗಿತ್ತು. ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ ಸಂಸದ ಶ್ರೇಯಸ್ ಪಟೇಲ್ ಅವರು, ಅಧಿಕಾರಿಗಳಿಂದ ಮಾಹಿತಿ ಪಡೆದು ಹೆಚ್ಚುವರಿ ಅನುದಾನಕ್ಕಾಗಿ ಪ್ರಸ್ತಾವನೆ ಸಲ್ಲಿಸಿದ್ದರು. ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ
ಡಿ.ಕೆ. ಶಿವಕುಮಾರ್, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ಅವರ ಗಮನಕ್ಕೆ ತಂದಿದ್ದರು. ಸಂಸದರ ಮನವಿಗೆ ಸ್ಪಂದಿಸಿರುವ ಸರ್ಕಾರ, ಹೆಚ್ಚುವರಿ ಅನುದಾನ ನೀಡಲು ಅನುಮೋದನೆ ನೀಡಿದೆ. ಅನುದಾನ ಕೊರತೆಯಿಂದ ಸ್ಥಗಿತಗೊಂಡಿದ್ದ ಕಟ್ಟಡ ಕಾಮಗಾರಿಗೆ ವೇಗ ಸಿಗುವ ನಿರೀಕ್ಷೆ ಹೆಚ್ಚಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಸಂಸದ ಶ್ರೇಯಸ್ ಪಟೇಲ್ ಅವರು, ಸದಾ ಅಭಿವೃದ್ಧಿಪರ ಚಿಂತನೆಯೊಂದಿಗೆ ಕಾರ್ಯನಿರ್ವಹಿಸುವ ನಮ್ಮ ಸರ್ಕಾರವು ಬಹುದಿನಗಳ ಬೇಡಿಕೆಗೆ ಸ್ಪಂದಿಸಿದೆ. ಈ ಯೋಜನೆಯಿಂದ ತಾಲ್ಲೂಕಿನ ಆಡಳಿತ ವ್ಯವಸ್ಥೆಗೆ ಹೊಸ ಬಲ ದೊರೆಯುವ ಆಶಾಭಾವ ಮೂಡಿದೆ ಎಂದಿದ್ದಾರೆ.
