ಸಕಲೇಶಪುರ: ರಾಜ್ಯದ ಮಹತ್ವಾಕಾಂಕ್ಷಿ ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಗೆ ಸಂಬಂಧಿಸಿದ ಕಚೇರಿ, ಕೋಟ್ಯಂತರ ರೂ. ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡ ಪರಿಣಾಮ ವಿದ್ಯುತ್ ಸರಬರಾಜು ಕಡಿತಗೊಂಡು ಸಂಪೂರ್ಣವಾಗಿ ಕತ್ತಲಲ್ಲಿ ಮುಳುಗಿದೆ.
ನೀರು ಹರಿಸಲು ವಿದ್ಯುತ್‌ಗಾಗಿ ಕೋಟ್ಯಾಂತರ ರೂ. ಖರ್ಚು ಮಾಡಲಾಗಿದೆ. 2024 ರ ಸೆಪ್ಟೆಂಬರ್ ನಲ್ಲಿ ಎತ್ತಿನಹೊಳೆ ಯೋಜನೆಗೆ ಚಾಲನೆ ನೀಡಲಾಗಿದ್ದು ಹಾಸನ, ಚಿಕ್ಕಮಗಳೂರು ಹಾಗೂ ಚಿತ್ರದುರ್ಗ ಜಿಲ್ಲೆಗಳ ದ್ವಾರ ಸಮುದ್ರ, ವೇದವ್ಯಾಲಿ, ವಾಣಿವಿಲಾಸ ಕೆರೆಗಳಿಗೆ ತಾಲೂಕಿನ ಹೆಬ್ಬನಹಳ್ಳಿಯಲ್ಲಿ ನೀರನ್ನು ಪಂಪ್ ಮಾಡಿ ಹರಿಸಲಾಗಿತ್ತು. 2024ರಲ್ಲಿ ಸುಮಾರು 1.5 ಟಿ.ಎಮ್.ಸಿ ನೀರು ಹರಿದಿದ್ದು ಇದಕ್ಕಾಗಿ 14 ಮೆಗವ್ಯಾಟ್ ವಿದ್ಯುತ್ ಖರ್ಚು ಮಾಡಿದ್ದು ಸುಮಾರು 52 ಕೋಟಿ ಹಣ ವಿದ್ಯುತ್ ಬಿಲ್ ಎತ್ತಿನಹೊಳೆ ಯೋಜನೆಯಿಂದ ಪಾವತಿ ಮಾಡಬೇಕಾಗಿತ್ತು. 2025ರಲ್ಲಿ ಉತ್ತಮ ಮಳೆಯಿಂದಾಗಿ ರಾಜ್ಯದ ಕೆರೆಗಳು, ಜಲಾಶಯಗಳು ತುಂಬಿದ್ದರಿಂದ ಎತ್ತಿನಹೊಳೆಯಿಂದ ಹೇಮಾವತಿ ನದಿಗೆ ಹರಿಸಿ ಸುಮಾರು 2 ಟಿ.ಎಮ್.ಸಿ ನೀರನ್ನು ಬಿಡಲಾಗಿದೆ ಹಾಗೂ ಇತರ ಕೆರೆಗಳಿಗೆ 0.3 ಟಿ.ಎಮ್.ಸಿ ನೀರನ್ನು ಬಿಡಲಾಗಿದ್ದು ಇದಕ್ಕೆ ಒಟ್ಟು 18.25 ಮೆಗವ್ಯಾಟ್ ವಿದ್ಯುತ್ ವ್ಯಯ ಮಾಡಲಾಗಿದೆ. ಇದೀಗ ಒಟ್ಟಾರೆ ಸುಮಾರು 223 ಕೋಟಿ ರೂಗಳನ್ನು ಎತ್ತಿನಹೊಳೆ ಯೋಜನೆಯಿಂದ ನೀರು ಹರಿಸಿದ ಹಿನ್ನೆಲೆಯಲ್ಲಿ ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ ಕೆಪಿಟಿಸಿಎಲ್‌ಗೆ ಪಾವತಿ ಮಾಡಬೇಕಾಗಿದೆ. ಇದರಲ್ಲಿ ಪ್ರತಿ ತಿಂಗಳು 9, 10 ಕೋಟಿ ಗಳಷ್ಟು ಕನಿಷ್ಠ ಹಣ ಪಾವತಿ ಮಾಡಬೇಕಾಗಿರುತ್ತದೆ.
ಎತ್ತಿನಹೊಳೆ ಯೋಜನೆಯ ವಿದ್ಯುತ್ ಇಲಾಖೆಗೆ ದೀರ್ಘಕಾಲದಿಂದ ಬಾಕಿ ಉಳಿಸಿಕೊಂಡಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದ್ದರು ಎನ್ನಲಾಗಿದೆ. ಪ್ರತಿತಿಂಗಳು ಹಲವು ಬಾರಿ ನೋಟಿಸ್ ನೀಡಿದರೂ ಬಿಲ್ ಪಾವತಿಯಾಗದೆ ಉಳಿದ ಹಿನ್ನೆಲೆಯಲ್ಲಿ ಕೊನೆಗೆ ವಿದ್ಯುತ್ ಇಲಾಖೆಯು ಕಚೇರಿಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿದೆ.

Leave a Reply

Your email address will not be published. Required fields are marked *