ಹಾಸನ: ರಾಮ ರಾಜ್ಯದ ಕನಸು ಕಂಡಿದ್ದ ಮಹಾತ್ಮ ಗಾಂಧೀಜಿ ಅವರ ಕನಸು ಸಾಕಾರಗೊಳಿಸುವುದಕ್ಕಾಗಿ ನರೇಗಾ ಯೋಜನೆಯಲ್ಲಿ ಬದಲಾವಣೆ ಮಾಡಿಕೊಳ್ಳಲಾಗಿದೆ. ಆದರೆ ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಶನಿವಾರ ಮಾತನಾಡಿ, ವಿಕಸಿತ ಭಾರತ್ ಜಿ ರಾಮ್ ಜಿ ಯೋಜನೆ ಕುರಿತು ಉದ್ದೇಶಪೂರ್ವಕಾವಾಗಿ ಅಪಪ್ರಚಾರ ಮಾಡಲಾಗುತ್ತಿದೆ.
ಸತ್ಯ ಹೊಸ್ತಿಲು ದಾಟುವ ಮುನ್ನ ಸುಳ್ಳು ಊರು ಸುತ್ತಾಡಿ ಬರುತ್ತದೆ ಎಂಬ ಮಾತಿದೆ. 1989ರಲ್ಲಿ ಪ್ರಧಾನ ಮಂತ್ರಿ ರೋಜಗಾರ್ ಯೋಜನೆ ಜಾರಿಗೊಳಿಸಲಾಯಿತು. ನಿರ್ದಿಷ್ಟ ಬಜೆಟ್ ಅನ್ನು ಆಗ ಇಟ್ಟಿರಲಿಲ್ಲ. ಅಟಲ್ ಬಿಹಾರಿ ವಾಜಪೇಯಿ ಅವರು ಜವಾಹರ್ ಗ್ರಾಮ ಸಮೃದ್ಧಿ ಯೋಜನೆ ಜಾರಿಗೊಳಿಸಿದರು. ಅದನ್ನು 2005ರಲ್ಲಿ ನರೇಗಾ ಅಂತ ಇದೇ ಯುಪಿಎ ಮಾಡಿತು. ಯೋಜನೆಗಾಗಿ 2013ರಲ್ಲಿ 30 ಸಾವಿರ ಕೋಟಿ ರೂ. ಖರ್ಚು ಮಾಡಿದ್ದರು. ಈಗ 2.30 ಲಕ್ಷ ಕೋಟಿ ರೂ ಆಗಿದೆ. ಕಾಲಕಾಲಕ್ಕೆ ಯೋಜನೆಗಳನ್ನು ಬದಲಾವಣೆ ಮಾಡಲಾಗಿದೆ. ಸಾಧಕ ಬಾಧಕಗಳನ್ನು ಗುರುತಿಸಿ ಬದಲಾವಣೆ ಮಾಡುವುದು ಸಂಪ್ರದಾಯ.
ಆದರೆ ನರೇಗಾ ಹೆಸರಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರವನ್ನು ಗುರುತಿಸಿ ಲೋಪ ಸರಿಪಡಿಸಲಾಗಿದೆ.
ಗಾಂಧಿ ಹೆಸರನ್ನು ತೆಗೆದ ಮಾತ್ರಕ್ಕೆ ಅಗೌರವ ಎಂದು ಭಾವಿಸಬಾರದು. ಗಾಂಧಿ ತತ್ವಗಳನ್ನು ಪಾಲಿಸಬೇಕಾಗುತ್ತದೆ. ಗಾಂಧೀಜಿ ರಾಮನ ಸ್ಮರಿಸುತ್ತಿದ್ದರು. ನೀವು ರಾಮನ ಅಸ್ತಿತ್ವವನ್ನು ಪ್ರಶ್ನಿಸಿದಿರಿ. ಗಾಂಧೀಜಿ ಪಾರದರ್ಶಕತೆ ಪ್ರತಿಪಾದಿಸಿದ್ದರು. ನೀವು ಭ್ರಷ್ಟಾಚಾರ ಬೆಳೆಸಿದಿರಿ. ಗಾಂಧೀಜಿ ಹೆಸರು ಹೇಳಲು ನೀವು ನೈತಿಕತೆ ಉಳಿಸಿಕೊಂಡಿಲ್ಲ. ಗಾಂಧಿ ಹೆಸರಿನ ಕಾಂಗ್ರೆಸ್ಸಿಗರು ಉಳಿಸಿಕೊಂಡಿದ್ದಾರೆ ಹೊರತು ಅವರ ತತ್ವಗಳನ್ನಲ್ಲ.
ಗಾಂಧೀಜಿ ಬದುಕಿದ್ದರೆ ನಿಮ್ಮ ವಿರುದ್ಧ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದರು ಇಲ್ಲವೇ ಸಲ್ಲೇಖನ ವೃತ ಮಾಡುತ್ತಿದ್ದರು ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

