ಆಲೂರು: ಕೌಟುಂಬಿಕ ಕಹಲದಿಂದ ಹೆಂಡತಿಯಿಂದ ದೂರವಾಗಿದ್ದ ಪತಿ ಕುಡಿದ ಅಮಲಿನಲ್ಲಿ ಆಕೆಯನ್ನು ಕೊಂದು ಸಾಕ್ಷ್ಯ ನಾಶಕ್ಕಾಗಿ ಶವವನ್ನು ಯಗಚಿ ನದಿಗೆ ಎಸೆದಿರುವ ಘಟನೆ ನಡೆದಿದೆ.
ತಾಲ್ಲೂಕಿನ ಯಡೂರು ನಿವಾಸಿ ರಾಧಾ (40) ಮೃತ ದುರ್ದೈವಿ. ಪತಿ ಕುಮಾರ್ ಹತ್ಯೆಗೈದು ನಾಪತ್ತೆಯಾಗಿದ್ದಾನೆ.
22 ವರ್ಷಗಳ ಹಿಂದೆ ವಿವಾಹವಾಗಿದ್ದ ದಂಪತಿಗೆ ಪುತ್ರ ಇದ್ದಾನೆ. ಹೆಂಡತಿಯ ಶೀಲ ಶಂಕಿಸಿ ಕುಮಾರ್ ನಿತ್ಯ ಜಗಳ ಮಾಡುತ್ತಿದ್ದ. ಹೀಗಾಗಿ ಕಳೆದ ಎಂಟು ವರ್ಷಗಳಿಂದ ಇಬ್ಬರೂ ಪ್ರತ್ಯೇಕವಾಗಿದ್ದರು. ರಾಧಾ ಹಾಸನದ ಆಡುವಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿದ್ದು, ಕೂಲಿ ಕೆಲಸ ಮಾಡಿಕೊಂಡಿದ್ದರು. ಕುಮಾರ್ ಯಡೂರಿನಲ್ಲಿ ತನ್ನ ತಾಯಿ ಜೊತೆಗೆ ವಾಸವಿದ್ದ.
ಕಳೆದ ಶನಿವಾರ ರಾತ್ರಿ 10 ಗಂಟೆಗೆ ಯಡೂರಿಗೆ ಬಂದಿದ್ದ ಪತ್ನಿ ಜೊತೆಗೆ ಜಗಳ ಶುರು ಮಾಡಿದ ಕುಮಾರ್ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ ಕುಡಿದ ಅಮಲಿನಲ್ಲಿ ಕೆನ್ನೆಗೆ ಜೋರಾಗಿ ಹೊಡೆದಿದ್ದ. ಬಲವಾದ ಹೊಡೆತಕ್ಕೆ ಪ್ರಜ್ಞೆ ತಪ್ಪಿ ಬಿದ್ದಿದ್ದ ರಾಧಾ ಕೆಲ ಸಮಯದ ಬಳಿಕ ಮೃತಪಟ್ಟಿದ್ದರು.
ಕೊಲೆ ಮಾಡಿದ್ದು ತಾನೇ ಎಂಬುದು ಗೊತ್ತಾದರೆ ಜೈಲು ಸೇರಬೇಕಾಗುತ್ತದೆಂದು ಸಾಕ್ಷ್ಯ ನಾಶಕ್ಕಾಗಿ ಶವವನ್ನು ಬೆಡ್‌ಶೀಟ್‌ನಲ್ಲಿ ಕಟ್ಟಿ ಬೈಕ್‌ನಲ್ಲಿ ಯಗಚಿ ನದಿಗೆ ತಂದು ಎಸೆದಿದ್ದ. ರಾಧಾ ಕಾಣೆಯಾಗಿರುವ ಕುರಿತು ದೂರು ದಾಖಲಿಸಿಕೊಂಡಿದ್ದ ಪೊಲೀಸರು ಪರಿಶೀಲನೆ ನಡೆಸಿದಾಗ ನದಿಯಲ್ಲಿ ಶವ ಪತ್ತೆಯಾಗಿದೆ. ಆರೋಪಿ ಪತ್ತೆಗಾಗಿ ಬಲೆ ಬೀಸಲಾಗಿದೆ. ಆಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
