ಚನ್ನರಾಯಪಟ್ಟಣ: ಜಮೀನು ವಿಚಾರವಾಗಿ ಉಂಟಾಗಿದ್ದ ಸಮಸ್ಯೆಯನ್ನು ಸಂಧಾನದ ಮೂಲಕ ಬಗೆಹರಿಸುವುದಾಗಿ ಮನೆಗೆ ಕರೆಸಿಕೊಂಡ ಮಾಜಿ ಸೈನಿಕನೊಬ್ಬ ಮೂವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ತಾಲ್ಲೂಕಿನ ಬಾಗೂರು ಗ್ರಾಮದಲ್ಲಿ ಗುರುವಾರ ನಡೆದಿದೆ.
ಗ್ರಾಮದ ವೆಂಕಟೇಶ್ ಎಂಬಾತ ತನ್ನ ಅತ್ತೆ ಮಗ ಶೇಖರ್ ಹಾಗು ಅವರ ಪತ್ನಿ ಪ್ರೇಮಕುಮಾರಿ, ಪುತ್ರ ವೆಂಕಟೇಶ್ ಮೇಲೆ ಮಚ್ಚಿನಿಂದ ಮನಬಂದಂತೆ ಹಲ್ಲೆ ನಡೆಸಿದ್ದಾನೆ. ಸೈನಿಕನಾಗಿದ್ದ ವೆಂಕಟೇಶ್ ಸೇವೆಯಿಂದ ನಿವೃತ್ತನಾಗಿ ಕೃಷಿ ಕೆಲಸ ಮಾಡಿಕೊಂಡಿದ್ದ ಎನ್ನಲಾಗಿದೆ.
ಜಮೀನು ವಿಚಾರವಾಗಿ ಅತ್ತೆ ಮಗ ಶೇಖರ್ ಜೊತೆಗೆ ಮನಸ್ತಾಪವಿತ್ತು. ಇತ್ತೀಚೆಗೆ ಎರಡೂ ಕಡೆಯವರು ಸುಮನಿದ್ದು ತಮ ಪಾಡಿಗೆ ತಾವು ಕೆಲಸ ಮಾಡಿಕೊಂಡಿದ್ದರು. ಆದರೆ, ಗುರುವಾರ ಬೆಳಿಗ್ಗೆ ಮಾಜಿ ಸೈನಿಕ ವೆಂಕಟೇಶ್‌ನು, ಶೇಖರ್‌ನನ್ನು ತನ್ನ ಮನೆಗೆ ಕರೆಸಿಕೊಂಡಿದ್ದ ಎಂದು ತಿಳಿದುಬಂದಿದೆ.
ರಾಜಿ ಸಂಧಾನದ ವೇಳೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಹತ್ತಿರದಲ್ಲೇ ಇದ್ದ ಮಚ್ಚಿನಿಂದ ಶೇಖರ್ ತಲೆಗೆ ಬೀಸಿದ್ದಾನೆ. ಜಗಳ ಬಿಡಿಸಲು ಬಂದ ಶೇಖರ್ ಪತ್ನಿ ಪ್ರೇಮಕುಮಾರಿ, ಪುತ್ರ ವೆಂಕಟೇಶ್‌ನ ಕುತ್ತಿಗೆಗೂ ಇರಿದಿದ್ದಾನೆ. ಕೆಲವೇ ಕ್ಷಣಗಳಲ್ಲಿ ಮನೆ ಪೂರ್ತಿ ರಕ್ತದ ಮಡುವಿನಲ್ಲಿ ಮುಳುಗಿದ್ದು ಗಂಭೀರ ಗಾಯಗೊಂಡಿದ್ದ ಮೂವರು ನೆಲದ ಮೇಲೆ ಬಿದ್ದು ಹೊರಳಾಡುತ್ತಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಅಕ್ಕಪಕ್ಕದ ಮನೆಯವರು ಕೂಡಲೇ ಪೊಲೀಸರಿಗೆ ತಿಳಿಸಿದ್ದಾರೆ. ಆ್ಯಂಬುಲೆನ್‌್ಸ ಮೂಲಕ ಮೂವರನ್ನು ಹಿಮ್ಸೌಗೆ ದಾಖಲಿಸಲಾಯಿತು. ಮಾಜಿ ಸೈನಿಕ ವೆಂಕಟೇಶ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆತನ ಪತ್ನಿ ರಾಣಿ ಹಾಗು ಸಂಬಂಧಿ ರತ್ನ ಎಂಬುವವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಗ್ರಾಮಾಂತರ ಠಾಣೆ ಪೊಲೀಸರು ಮನೆ ಸುತ್ತಲಿನ ಸಿಸಿಟಿವಿ ಕ್ಯಾಮರಾ ದೃಶ್ಯಾವಳಿ ಆಧರಿಸಿ ತನಿಖೆ ಮುಂದುವರಿಸಿದ್ದಾರೆ.
