ಹಾಸನ: ಕರ್ನಾಟಕ ಸಾಹಿತ್ಯ ಅಕಾಡೆಮಿ ಕೊಡಮಾಡುವ ಸಾಹಿತ್ಯಶ್ರೀ ಪ್ರಶಸ್ತಿಗೆ ಲೇಖಕಿ ರೂಪ ಹಾಸನ ಭಾಜನರಾಗಿದ್ದಾರೆ.

ಅದೇ ರೀತಿ ಡಾ.ಚಂದ್ರು ಕಾಳೇನಹಳ್ಳಿ ಅವರ ಗಂಧವತಿ (ನಾಟಕ), ಡಾ.ಹಂಪನಹಳ್ಳಿ ತಿಮೇಗೌಡ ಅವರ ದಾಸೊಕ್ಕಲಿಗರು (ಗ್ರಂಥ ಸಂಪಾದನೆ/ಸಂಶೋಧನೆ), ಪಿ.ಭಾರತೀದೇವಿ ಅವರ ಚಲಿಸುತ್ತಿವೆ ಚುಕ್ಕಿಗಳು (ಕಾವ್ಯ) ಕೃತಿಗಳು ಬಹುಮಾನಕ್ಕೆ ಆಯ್ಕೆಯಾಗಿವೆ.
ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ಸೇವೆಯನ್ನು ಗುರುತಿಸಿ ಅಕಾಡೆಮಿ ೨೦೨೫ನೇ ಸಾಲಿನ ಸಾಹಿತ್ಯಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಬುಧವಾರ ಅಕಾಡೆಮಿ ಅಧ್ಯಕ್ಷ ಎಲ್.ಎನ್.ಮುಕುಂದರಾಜ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಹಾಸನ ಜಿಲ್ಲೆಯಿಂದ ರೂಪ ಹಾಸನ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಯೂ ೨೫ ಸಾವಿರರೂ. ನಗದು, ಪ್ರಶಸ್ತಿ ಫಲಕ ಒಳಗೊಂಡಿದೆ.
ಕವಯತ್ರಿ, ಲೇಖಕಿ ಮತ್ತು ಸಾಮಾಜಿಕ ಹೋರಾಟಗಾರ್ತಿಯಾಗಿ ಗುರುತಿಸಿಕೊಂಡಿರುವ ರೂಪ ಹಾಸನ ಅವರು, ಮಹಿಳೆ, ಮಕ್ಕಳು, ಪರಿಸರ, ಶಿಕ್ಷಣ ವಿಷಯಗಳ ಕುರಿತು ಹಲವು ಕೃತಿಗಳನ್ನು ರಚಿಸಿ ಪ್ರಸಿದ್ಧಿ ಪಡೆದಿದ್ದಾರೆ.
ಬಹುಮಾನ ಪಡೆದ ಕೃತಿಗಳು:
೨೦೨೪ರಲ್ಲಿ ಪ್ರಕಟವಾದ ವಿವಿಧ ೧೭ ಸಾಹಿತ್ಯ ಪ್ರಕಾರದ ಕೃತಿಗಳಿಗೆ ವಿಮರ್ಶಕರ ಅಭಿಪ್ರಾಯಗಳನ್ನು ಆಧರಿಸಿ ವರ್ಷದ ಅತ್ಯತ್ತಮ ಕೃತಿ ಬಹುಮಾನಕ್ಕೆ ನಾಟಕ ಪ್ರಕಾರದಲ್ಲಿ ಡಾ.ಚಂದ್ರು ಕಾಳೇನಹಳ್ಳಿ ಅವರ ಗಂಧವತಿ, ಡಾ.ಹಂಪನಹಳ್ಳಿ ತಿಮೇಗೌಡ ಅವರ ಸಂಶೋಧನಾ ಕೃತಿ ದಾಸೊಕ್ಕಲಿಗರು ಹಾಗು ಕಾವ್ಯ ಪ್ರಕಾರದ ಚಲಿಸುತ್ತಿವೆ ಚುಕ್ಕಿಗಳು ಪಿ.ಭಾರತೀದೇವಿ ಅವರ ಕೃತಿಗಳು ಆಯ್ಕೆಯಾಗಿವೆ.
ಚನ್ನರಾಯಪಟ್ಟಣ ತಾಲ್ಲೂಕಿನ ಕಾಳೇನಹಳ್ಳಿಯವರಾದ ಡಾ.ಚಂದ್ರು ಕಾಳೇನಹಳ್ಳಿ ಅವರು ಖ್ಯಾತ ಜಾನಪದ ವಿದ್ವಾಂಸ, ನಾಟಕಾರ, ರಂಗಕರ್ಮಿಯಾಗಿದ್ದಾರೆ. ಈ ಹಿಂದೆ ಜಾನಪದ ಅಕಾಡೆಮಿ ವಾರ್ಷಿಕ ಪ್ರಶಸ್ತಿಗೆ ೨೦೨೧ರಲ್ಲಿ ಆಯ್ಕೆಯಾಗಿದ್ದರು.
ಡಾ.ಹಂಪನಹಳ್ಳಿ ತಿಮೇಗೌಡ ಅವರು ಜಿಲ್ಲೆಯ ಜಾನಪದ ವಿದ್ವಾಂಸ, ಸಾಹಿತಿ, ಸಂಶೋಧಕರಾಗಿ ಗುರಿಸಿಕೊಂಡಿದ್ದಾರೆ. ೨೦೨೦ರಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.
ಪತ್ರಕರ್ತ ಸತೀಶ್ ಶಿಲೆ ಅವರ ಪತ್ನಿಯಾಗಿರುವ ಭಾರತಿದೇವಿ ಅವರು ಕವಯತ್ರಿ, ಅಂಕಣಗಾರ್ತಿಯಾಗಿ ಗುರುತಿಸಿಕೊಂಡಿದ್ದಾರೆ. ಈ ಹಿಂದೆ ಹೊಳೆನರಸೀಪುರದಲ್ಲಿ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸಿದ್ದರು.

Leave a Reply

Your email address will not be published. Required fields are marked *