ಹಾಸನ: ಒಳ ಮೀಸಲಾತಿ ಹೋರಾಟ ಸಂಬಂಧ ಕಾಂಗ್ರೆಸ್‌‍ನ ಕೆಲವರು ಬಲಗೈ ಸಮುದಾಯದ ಹೋರಾಟ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ದಲಿತಪರ ಹೋರಾಟಗಾರರ ಒಕ್ಕೂಟದ ಮುಖಂಡ ದಿನೇಶ್‌ ಅವರು ಆರೋಪಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌‍ನಲ್ಲಿ ಗುರುತಿಸಿಕೊಂಡಿರುವ ಮಲ್ಲಿಗೆವಾಳು ದ್ಯಾವಪ್ಪ, ಕೃಷ್ಣ ಕುಮಾರ್‌, ಹೊಳೆನರಸೀಪುರದ ಸೋಮಶೇಖರ್‌ ಎಂಬುವರು ಒಕ್ಕೂಟ ಮಾಡಿಕೊಂಡು ಮಾ.25 ರಂದು ಬೆಂಗಳೂರಿನಲ್ಲಿ ಬೃಹತ್‌ ಪ್ರತಿಭಟನೆ ಇದೆ ಎಂದು ಪ್ರಚಾರ ಮಾಡುತ್ತಿದ್ದಾರೆ. ಜ್ಞಾನಪ್ರಕಾಶ ಸ್ವಾಮೀಜಿ ಹಾಗು ಸಕಲೇಶಪುರ ಪರಾಜಿತ ಅಭ್ಯರ್ಥಿ ಕಾಂಗ್ರೆಸ್‌‍ನ ಸಿದ್ದಯ್ಯ ಅವರನ್ನು ರಾಜ್ಯ ಹೋರಾಟ ಸಮಿತಿಯಲ್ಲಿ ಸೇರಿಸಿಕೊಂಡಿದ್ದಾರೆ. ಆದರೆ ಪ್ರತಿಭಟನಾ ಸಮಾವೇಶ ಮಾಡುತ್ತಿರುವುದು ಯಾರು ಎಂಬ ಗೊಂದಲ ಮನೆ ಮಾಡಿದೆ ಎಂದು ಅನುಮಾನ ವ್ಯಕ್ತಪಡಿಸಿದರು.
ಸರ್ಕಾರ ಮಾಡಿಸುತ್ತಿದೆಯೋ, ಸರ್ಕಾರವನ್ನು ಪ್ರತಿನಿಧಿಸುತ್ತಿರುವ ದಲಿತ ಬಲಗೈ ಸಚಿವರು ಮಾಡಿಸುತ್ತಿದ್ದಾರೆಯೋ ಗೊತ್ತಿಲ್ಲ. ಆದರೆ, ಇವರೇ ಸ್ವಯಂಘೋಷಿತವಾಗಿ ಸಮಿತಿ ಮಾಡಿಕೊಂಡು ಜಿಲ್ಲೆಯ ಕೆಲ ಹೋರಾಟಗಾರರನ್ನು ತಮ ಜೊತೆ ಸೇರಿಸಿಕೊಂಡು ಸಮಾವೇಶ ಮಾಡಲು ಹೊರಟಿದ್ದಾರೆ.
ಈ ನಡೆಯನ್ನು ನಾವು ಖಂಡಿಸುತ್ತೇವೆ. ಕಾರಣ ಇವರು ಬಲಗೈ ಸಮುದಾಯದ ಮುಖಂಡರನ್ನು ಆಹ್ವಾನಿಸಿ ಸಭೆ ಮಾಡದೆ ಏಕಾಏಕಿ ಬೆಂಗಳೂರಿಗೆ ಹೊರಟಿದ್ದಾರೆ. ಖರ್ಚುವೆಚ್ಚದ ಲಕ್ಷಾಂತರ ಹಣವನ್ನು ತಾವೇ ಹಂಚಿಕೊಳ್ಳುವುದು ಇವರ ಹುನ್ನಾರ. ಈ ಬಗ್ಗೆ ಸ್ಪಷ್ಟನೆ ನೀಡಬೇಕು. ಕಾಂಗ್ರೆಸ್‌‍ ಪಕ್ಷದ ಸಖ್ಯ ಹೊಂದಿರುವವರನ್ನು ಸಮಿತಿಯಿಂದ ಹೊರ ಹಾಕಬೇಕು ಎಂದು ಒತ್ತಾಯಿಸಿದರು.
ಮುಖಂಡರಾದ ಚೌಡಳ್ಳಿ ಜಗದೀಶ್‌, ವಿಠ್ಠಲ್‌, ತಟ್ಟೆಕೆರೆ ಮಂಜುನಾಥ್‌, ದೇವರಾಜ್‌, ನಾಗರಾಜ್‌, ಶಿವಣ್ಣ ಇದ್ದರು.

Leave a Reply

Your email address will not be published. Required fields are marked *