ಹೊಳೆನರಸೀಪುರ: ಕಳೆದ 16 ವರ್ಷಗಳ ಹಿಂದೆ ಪಟ್ಟಣದಲ್ಲಿ ಕೊಲೆಯಾಗಿದ್ದ ತ್ರಿನೇಶ್ ಕೊಲೆ ಪ್ರಕರಣದ ಆರೋಪಿ ಪುಟ್ಟರಾಜ್ (ಪುಟ್ಟಿ) ಮತ್ತು ಗ್ಯಾಂಗ್‌ಗೆ ಜಿಲ್ಲಾ ನ್ಯಾಯಾಲಯ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಹೈಕೋರ್ಟ್ ಭಾಗಶ: ಎತ್ತಿ ಹಿಡಿದಿದೆ.
ಪಟ್ಟಣದ ದೊಡ್ಡಮಸೀದಿ ಬೀದಿಯ ಗಲ್ಲಿಯೊಂದರಲ್ಲಿ 2009 ರ ಡಿಸೆಂಬರ್ 9ರಂದು ತ್ರಿನೇಶ್ ಮೇಲೆ ಮಚ್ಚು, ಲಾಂಗ್‌ಗಳಿಂದ ಮಾರಣಾಂತಿಕವಾಗಿ ಹಲ್ಲೆ ನಡೆದಿತ್ತು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಈತನನ್ನು ಪಟ್ಟಣದ ಆಸ್ಪತ್ರೆ, ನಂತರ ಬೆಂಗಳೂರಿನ ನಿಮ್ಹಾನ್ಸ್ ಗೂ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆದಾಗ್ಯೂ ಫಲಕಾರಿಯಾಗದೆ 2009ರ ಡಿ. 11 ರಂದು ಮೃತಪಟ್ಟಿದ್ದ. ಅಂದಿನಿಂದ ಈ ವರೆಗೆ ನ್ಯಾಯಾಲಯದ ನಾನಾ ಹಂತದಲ್ಲಿ ಪ್ರಕರಣ ನಡೆದಿತ್ತು. ರಾಜಕೀಯ ಬೆಂಬಲದ ರಂಗಿನಾಟದಲ್ಲಿ ರಕ್ತದ ಕಲೆ ಮಾಸುವುದೇ ಎನ್ನುವಷ್ಟರಲ್ಲಿ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಮೇಲ್ಮನವಿ, ಜಾಮೀನು ಇವುಗಳ ಕಾನೂನಾತ್ಮಕ ಹೋರಾಟದ ಮಜಲುಗಳಿಗೆ ಇದೀಗ ತೆರೆ ಬಿದ್ದಿದೆ. ಸರ್ವೋಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಮತ್ತೆ ಜಾಮೀನು ಕೋರುವ ಪ್ರಯತ್ನದಲ್ಲಿ ಇದ್ದಾಗಲೇ ರಾಜ್ಯ ಹೈಕೋರ್ಟ್ ಪುರಸಭಾ ಮಾಜಿ ಅಧ್ಯಕ್ಷ ಎಚ್.ವಿ.ಪುಟ್ಟರಾಜ್ (ಪುಟ್ಟಿ) ಮತ್ತು ಐವರಿಗೆ ಜೀವಾ ಅವಧಿ ಶಿಕ್ಷೆ ವಿಧಿಸಿ ಆದೇಶ ನೀಡಿದೆ.

Leave a Reply

Your email address will not be published. Required fields are marked *