ಹಾಸನ: ಅರಸೀಕೆರೆ ತಾಲ್ಲೂಕಿನ ತಾವರೆಹಳ್ಳಿ ಖಾಲಿ ಜಾಗದಲ್ಲಿ ಯುವಕನ ಶವ ಪತ್ತೆಯಾಗಿದ್ದು ಕೊಲೆ ಶಂಕೆ
ವ್ಯಕ್ತವಾಗಿದೆ.
ಅರಕೆರೆ ಗ್ರಾಮದ ಪ್ರವೀಣ್ (34) ಮೃತ. ಯುಗಾದಿ ಹಬ್ಬದ ಪ್ರಯುಕ್ತ ಸುತ್ತಮುತ್ತಲ ಗ್ರಾಮದ ಯುವಕರು ಇಸ್ಪಿಟ್ ಆಟದಲ್ಲಿ ತೊಡಗಿದ್ದ ವೇಳೆ ಪ್ರವೀಣ್ ಕೂಡ ಭಾಗವಹಿಸಿದ್ದ ಎಂದು ತಿಳಿದುಬಂದಿದೆ.
ಆಟದ ವೇಳೆ ಹಣದ ವಿಚಾರಕ್ಕೆ ಗಲಾಟೆ ನಡೆದು, ಪ್ರವೀಣ್ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಮೃತದೇಹದ ಮೂಗು ಹಾಗೂ ಕಣ್ಣಿನಲ್ಲಿ ರಕ್ತಸ್ರಾವ ಕಂಡುಬಂದಿದ್ದು, ಹಲ್ಲೆಯ ಗುರುತುಗಳು ಸ್ಪಷ್ಟವಾಗಿವೆ.
ರಾತ್ರಿ ಸುಮಾರು 11 ಗಂಟೆ ವೇಳೆಗೆ ಇಸ್ಪಿಟ್ ಅಡ್ಡೆಯ ಮೇಲೆ ಜಾವಗಲ್ ಠಾಣಾ ಪೊಲೀಸರು ದಾಳಿ ನಡೆಸಿದ ವೇಳೆ, ಕೆಲವರು ಸ್ಥಳದಿಂದ ಪರಾರಿಯಾಗಿದ್ದಾರೆ. ಸ್ಥಳದಲ್ಲಿದ್ದ ಐದು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಜಾವಗಲ್ ಪೊಲೀಸರು ಪರಿಶೀಲನೆ ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಹಾಸನದ ಹಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ.
ಈ ಸಂಬಂಧ ಜಾವಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *