ಹಾಸನ: ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಮಹತ್ವದ ತೀರ್ಪೊಂದನ್ನು ನೀಡಿದ್ದು, ವೈದ್ಯಕೀಯ ನಿರ್ಲಕ್ಷ್ಯದ ಪ್ರಕರಣದಲ್ಲಿ ದಂಡ ವಿಧಿಸಿ ಆದೇಶ ಹೊರಡಿಸಿದೆ. ಹೊಳೆನರಸೀಪುರದ ರಾಮಚಂದ್ರ ಎಂ. ಅವರು ತಮ್ಮ ಪತ್ನಿ ಶೋಭಾ (41) ಅವರ ಸಾವಿಗೆ ಸಂಬಂಧಿಸಿದಂತೆ ಸಲ್ಲಿಸಿದ್ದ ದೂರಿನ ವಿಚಾರಣೆ ನಡೆಸಿದ ಆಯೋಗ, ಪ್ರಕರಣದ ದಾಖಲೆಗಳು ಮತ್ತು ವೈದ್ಯಕೀಯ ವರದಿಗಳನ್ನು ಪರಿಶೀಲಿಸಿ ಮಹತ್ವದ ನಿರ್ಧಾರಕ್ಕೆ ಬಂದಿದೆ.
ಬೆನ್ನುನೋವಿನ ಚಿಕಿತ್ಸೆಗೆ ಜನಪ್ರಿಯ ಆಸ್ಪತ್ರೆಗೆ ದಾಖಲಾಗಿದ್ದ ಶೋಭಾ ಅವರಿಗೆ ಶಸ್ತ್ರಚಿಕಿತ್ಸೆ ವೇಳೆ ಇಲಿಯಾಕ್ ಆರ್ಟರಿಗೆ ಹಾನಿಯಾಗಿದ್ದು, ತಕ್ಷಣ ಸೂಕ್ತ ಚಿಕಿತ್ಸೆ ನೀಡದೇ ವಿಳಂಬವಾಗಿರುವುದು ಗಂಭೀರ ನಿರ್ಲಕ್ಷ್ಯವೆಂದು ಆಯೋಗ ಅಭಿಪ್ರಾಯಪಟ್ಟಿದೆ.
ಶಸ್ತ್ರಚಿಕಿತ್ಸೆಯ ನಂತರ ರೋಗಿಯ ಸ್ಥಿತಿ ಹದಗೆಟ್ಟಿದ್ದರೂ ತಕ್ಷಣ ತಜ್ಞರ ಸಲಹೆ ಪಡೆಯದೇ, ತಡವಾಗಿ ಉನ್ನತ ಚಿಕಿತ್ಸೆಗೆ ರವಾನಿಸಿರುವುದು ವೈದ್ಯಕೀಯ ಸೇವಾ ನ್ಯೂನ್ಯತೆ ಎಂದು ಸ್ಪಷ್ಟಪಡಿಸಲಾಗಿದೆ. ‘ರೆಸ್ ಇಪ್ಸಾ ಲೋಕ್ವಿಟರ್’ ತತ್ವದ ಆಧಾರದ ಮೇಲೆ ಪ್ರಕರಣದಲ್ಲೇ ನಿರ್ಲಕ್ಷ್ಯ ಸ್ಪಷ್ಟವಾಗಿರುವುದರಿಂದ, ಹೆಚ್ಚುವರಿ ತಜ್ಞರ ಅಭಿಪ್ರಾಯವಿಲ್ಲದೇ ಸಹ ನಿರ್ಧಾರ ಕೈಗೊಳ್ಳಬಹುದು ಎಂದು ಆಯೋಗ ಹೇಳಿದೆ.
ಅಂತಿಮವಾಗಿ, ಆಯೋಗವು ದೂರನ್ನು ಭಾಗಶಃ ಪುರಸ್ಕರಿಸಿ, ಜನಪ್ರಿಯ ಆಸ್ಪತ್ರೆ ಮತ್ತು ಸಂಬಂಧಿತ ವೈದ್ಯರು ಸೇರಿ ರೂ.13,40,189 ಪರಿಹಾರವನ್ನು ಹಾಗೂ ವಿಮಾ ಕಂಪನಿಯಿಂದ ರೂ.2,45,000 ಪಾವತಿಸಲು ಆದೇಶಿಸಿದೆ. ಜೊತೆಗೆ ರೂ.50,000ನ್ನು ವಿಚಾರಣಾ ವೆಚ್ಚವಾಗಿ 45 ದಿನಗಳೊಳಗೆ ಪಾವತಿಸಬೇಕೆಂದು ಸೂಚಿಸಲಾಗಿದೆ. ನಿರ್ದಿಷ್ಟ ಅವಧಿಯಲ್ಲಿ ಹಣ ಪಾವತಿಸದಿದ್ದಲ್ಲಿ 10% ಬಡ್ಡಿಯೊಂದಿಗೆ ಪಾವತಿಸಬೇಕೆಂದು ಆದೇಶಿಸಲಾಗಿದೆ. ಈ ಮೂಲಕ ವೈದ್ಯಕೀಯ ಕ್ಷೇತ್ರದಲ್ಲಿ ಜವಾಬ್ದಾರಿತನ ಮತ್ತು ಪಾರದರ್ಶಕತೆ ಅಗತ್ಯವಿದೆ ಎಂಬ ಸಂದೇಶವನ್ನು ಆಯೋಗ ನೀಡಿದೆ.
