ಬೆಂಗಳೂರು: ಆನೆಗಳ ಹಾವಳಿ ಹೆಚ್ಚಿರುವ ಹಾಸನ ಜಿಲ್ಲೆಯಲ್ಲಿ ಸಾರ್ವಜನಿಕರಿಗೆ ಮಾಹಿತಿ ನೀಡಲು ಮತ್ತು ಆನೆಗಳನ್ನು ಕಾಡಿಗೆ ಮರಳಿಸಲು ಜಿಲ್ಲಾ ಆನೆ ಕಾರ್ಯಪಡೆಗೆ 13 ಹೊಸಗಳು ಸೇರ್ಪಡೆಯಾಗಿದ್ದು, ಅರಣ್ಯ ಸಚಿವ ಈಶ್ವರ್ ಖಂಡ್ರೆ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು.
ಬೆಂಗಳೂರು ಮಲ್ಲೇಶ್ವರದ ಅರಣ್ಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವರು, 1 ಸ್ಕಾರ್ಪಿಯೋ, 2 ಕ್ಯಾಂಪರ್ ಹಾಗೂ 10 ದ್ವಿಚಕ್ರವಾಹನಗಳಿಗೆ ಹಸಿರು ನಿಶಾನೆ ತೋರಿ, ತಾವೇ ಬೈಕ್ ಓಡಿಸುವ ಮೂಲಕ ಚಾಲನೆ ನೀಡಿದರು.
ಮಾನವ-ವನ್ಯಜೀವಿ ಸಂಘರ್ಷ ನಿಯಂತ್ರಣಕ್ಕೆ ಇದು ಹೊಸ ಉಪಕ್ರಮವಾಗಿದೆ. ಈ ಎಲ್ಲ ವಾಹನಗಳಿಗೆ ವಾಕಿಟಾಕಿ ಮತ್ತು ಧ್ವನಿವರ್ಧಕ ಅಳವಡಿಸಲಾಗಿದ್ದು ಜಿಲ್ಲಾ ಆನೆ ಕಾರ್ಯಪಡೆ ಸಿಬ್ಬಂದಿ ವಾಹನಗಳಲ್ಲಿ ಗಸ್ತು ಮಾಡುತ್ತಾ, ಆನೆಗಳು ತೋಟ ಅಥವಾ ವಸತಿ ಪ್ರದೇಶಗಳ ಬಳಿ ಬಂದಾಗ ಸ್ಥಳೀಯರಿಗೆ ಧ್ವನಿವರ್ಧಕಗಳ ಮೂಲಕ ಎಚ್ಚರಿಕೆ ನೀಡುತ್ತಾರೆ. ಈ ವಾಹನಗಳನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತನ್ನ ಸಿಎಸ್.ಆರ್. ನಿಧಿಯಿಂದ ಅರಣ್ಯ ಇಲಾಖೆಗೆ ನೀಡಿದೆ ಎಂದು ಈಶ್ವರ ಖಂಡ್ರೆ ತಿಳಿಸಿದರು.

Leave a Reply

Your email address will not be published. Required fields are marked *