ಸಕಲೇಶಪುರ: ಸಾಲ ಕೊಟ್ಟಿದ್ದ ಹಣ ವಾಪಸ್ ಪಡೆಯುವಾಗ ಕೊರಳಲ್ಲಿದ್ದ ಚಿನ್ನದ ಸರವನ್ನು ಕಿತ್ತುಕೊಂಡಿದ್ದಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪಟ್ಡಣದ ಪ್ರಸನ್ನ ಎಂಬಾತನನ್ನೇ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ದಬ್ಬೆಗದ್ದೆಯ ರೇಣುಕಾ ಪ್ರಸಾದ್ ಹತ್ತು ದಿನಗಳ ಹಿಂದೆ ವುಷ ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಿಸದೆ ಶುಕ್ರವಾರ ಮೃತಪಟ್ಟಿದ್ದಾರೆ.
ಘಟನೆ ಹಿನ್ನೆಲೆ:
ಅಂದರ್-ಬಾಹರ್ ಜೂಜಾಟದಲ್ಲಿ ನಿರಂತರ ಸೋಲು ಅನುಭವಿಸಿ ಅವರು ಹೆಚ್ಚಿನ ಪ್ರಮಾಣದ ಹಣ ಕಳೆದುಕೊಂಡಿದ್ದರು. ಮತ್ತೆ ಜೂಜಾಟ ಆಡಲು ಪ್ರಸನ್ನ ಎಂಬುವವರಿಂದ ಬಡ್ಡಿಗೆ ಸಾಲ ಪಡೆದಿದ್ದರು ಎಂದು ತಿಳಿದುಬಂದಿದೆ. ಆದರೆ ಪುನಃ ಸೋಲು ಕಂಡು ಸಾಲದ ಒತ್ತಡಕ್ಕೆ ಒಳಗಾಗಿದ್ದರು ಎನ್ನಲಾಗಿದೆ.
ಸಾಲದ ಹಣ ವಾಪಸ್ ನೀಡುವ ವೇಳೆ ರೇಣುಕಾಪ್ರಸಾದ್ ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಸಾಲ ನೀಡಿದ ವ್ಯಕ್ತಿ ಕಿತ್ತುಕೊಂಡಿದ್ದಾನೆ ಎಂಬ ಆರೋಪವೂ ಕೇಳಿಬಂದಿತ್ತು.
