ಸಕಲೇಶಪುರ: ಚಲಿಸುತ್ತಿದ್ದ ರೈಲು ಬಡಿದು ವ್ಯಕ್ತಿಯೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ಎಡಕುಮೇರಿ–ಶಿರಬಾಗಿಲು ರೈಲು ಮಾರ್ಗದ ನಡುವೆ ನಡೆದಿದೆ.
ಗಾಯಗೊಂಡ ವ್ಯಕ್ತಿಯನ್ನು ಸಚಿನ್ (36) ಎಂದು ಗುರುತಿಸಲಾಗಿದೆ. ಅವರು ರೈಲ್ವೆ ಇಲಾಖೆಯ ಸಂಬಂಧಿತ ಕಾಮಗಾರಿಯಲ್ಲಿ ತೊಡಗಿದ್ದ ವೇಳೆ ಚಲಿಸುತ್ತಿದ್ದ ರೈಲು ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ.
ಅಪಘಾತದ ಪರಿಣಾಮ ಸಚಿನ್ ಅವರಿಗೆ ಎದೆ, ತಲೆ ಹಾಗೂ ಮುಖ ಭಾಗಗಳಿಗೆ ಗಂಭೀರ ಗಾಯಗಳಾಗಿವೆ. ಘಟನೆಯ ತಕ್ಷಣ ಸ್ಥಳದಲ್ಲಿದ್ದ ಸಹೋದ್ಯೋಗಿ ಕಾರ್ಮಿಕರು ಅವರನ್ನು ರಕ್ಷಿಸಿ ಸಕಲೇಶಪುರದ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
