ಹಾಸನ: ಬೇರೆ ಯಾರದೋ ಜೊತೆಗೆ ಮಾತನಾಡುತ್ತಿದ್ದಾಳೆಂಬ ಸಂಶಯದಿಂದ ಪ್ರಿಯತಮೆಯ ಕುತ್ತಿಗೆಗೆ ವೇಲ್‌ನಿಂದ ಬಿಗಿದು ಕೊಲೆ ಮಾಡಿದ್ದ ಪ್ರಿಯತಮನಿಗೆ ಜೀವಾವಧಿ ಶಿಕ್ಷೆ ವಿಧಿಸಿ ಜಿಲ್ಲಾ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.
ಸಕಲೇಶಪುರ ತಾಲ್ಲೂಕು ಯಸಳೂರು ಹೋಬಳಿ ಹಳ್ಳಿಯೂರು ಗ್ರಾಮದ ಪ್ರಿಯಾ ಮೃತರು. ಪ್ರದೀಪ್ ಶಿಕ್ಷೆಗೆ ಗುರಿಯಾದ ವ್ಯಕ್ತಿ. ಪ್ರಿಯಾ ಹಾಗು ಪ್ರದೀಪ್ ಪರಸ್ಪರ ಪ್ರೀತಿಸಿ ಕುಟುಂಬಸ್ಥರ ಸಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. 2015ರ ಜ. 7ರಂದು ಪ್ರಿಯಾ ಮೊಬೈಲ್‌ನಲ್ಲಿ ಯಾರದೋ ಜೊತೆಗೆ ಮಾತನಾಡುತ್ತಿದ್ದಾಳೆಂದು ಸಂಶಯದಿಂದ ಪ್ರದೀಪ್ ಆಕೆಯನ್ನು ಗ್ರಾಮ ಸಮೀಪದ ಕಾಡಿಗೆ ಕರೆದೊಯ್ದು ಧರಿಸಿದ್ದ ಚೂಡಿದಾರ್ ವೇಲ್‌ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದ. ಬಳಿಕ ಸಾಕ್ಷ್ಯ ನಾಶಕ್ಕಾಗಿ ಅದೇ ವೇಲ್‌ನಿಂದ ಪಕ್ಕದಲ್ಲೇ ಇದ್ದ ನೇರಳೆ ಮರದ ಕೊಂಬೆಗೆ ನೇಣು ಬಿಗಿದುಕೊಂಡಂತೆ ಮಾಡಿ ಆತಹತ್ಯೆಯ ಕಥೆ ಕಟ್ಟಿದ್ದ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ 3ನೇ ಅಪರ ಮತ್ತು ಸತ್ರ ನ್ಯಾಯಾಧೀಶ ಆನಂದ್ ಅವರು, ಪ್ರದೀಪ್ ವಿರುದ್ಧದ ಆರೋಪಗಳು ಸಾಬೀತಾದ ಹಿನ್ನಲೆಯಲ್ಲಿ ಜೀವಾವಧಿ ಶಿಕ್ಷೆ ಮತ್ತು 20 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ಯು.ವಿನಯರಾಣಿ ಮತ್ತು ಇ.ಡಿ. ಶ್ರೀನಿವಾಸ ವಾದ ಮಂಡಿಸಿದ್ದರು.
