ಸಕಲೇಶಪುರ: ತಾಲ್ಲೂಕಿನ ಯಸಳೂರು ಅರಣ್ಯ ಪ್ರದೇಶದ ದಬ್ಬಳಿಕಟ್ಟೆಯಲ್ಲಿ ನಿರ್ಮಿಸಿರುವ ಸಾಕಾನೆ ಅರ್ಜುನ ಸ್ಮಾರಕ ಮೇ 6ರ ಬುಧವಾರ ಲೋಕಾರ್ಪಣೆಯಾಗಲಿದ್ದು ಶಾಸಕ ಸಿಮೆಂಟ್ ಮಂಜು ಅವರು ಮಂಗಳವಾರ ಸ್ಥಳ ಪರಿಶೀಲಿಸಿದರು.
2023ರ ಡಿ. 4ರಂದು ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಅರ್ಜುನ ಆನೆ ವೀರ ಮರಣ ಹೊಂದಿತ್ತು. ಸಮಾಧಿ ಸ್ಥಳದಲ್ಲಿ ಸ್ಮಾರಕ ನಿರ್ಮಿಸಿ ಪ್ರವಾಸಿ ತಾಣವಾಗಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದ ಹಿನ್ನಲೆಯಲ್ಲಿ ಸರ್ಕಾರ ಸ್ಮಾರಕ ನಿರ್ಮಿಸಿದೆ.
ಉಪ ಅರಣ್ಯ ಸಂರಕ್ಷಣಾಧಿಕಾರಿ ಸೌರಭ್‌ಕುಮಾರ್ ಹಾಗು ಸ್ಥಳೀಯ ಅಧಿಕಾರಿಗಳೊಂದಿಗೆ ಚರ್ಚಿಸಿದ ಸಿಮೆಂಟ್ ಮಂಜು ಪ್ರವಾಸೋದ್ಯಮ ಉತ್ತೇಜಿಸುವ ನಿಟ್ಟಿನಲ್ಲಿ ಕೈಗೊಂಡಿರುವ ಕ್ರಮಗಳ ಕುರಿತು ಮಾತುಕತೆ ನಡೆಸಿದರು.
ಅರ್ಜುನ ಸ್ಮಾರಕ ಉದ್ಘಾಟನಾ ಸಮಾರಂಭದಲ್ಲಿ ಅರಣ್ಯ ಸಚಿವ ಈಶ್ವರ್ ಖಂಡ್ರೆ, ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ, ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡ, ಸಂಸದ ಶ್ರೇಯಸ್ ಪಟೇಲ್ ಭಾಗವಹಿಸಲಿದ್ದಾರೆ. ಶಾಸಕ ಸಿಮೆಂಟ್ ಮಂಜು ಅಧ್ಯಕ್ಷತೆ ವಹಿಸುವರು.
ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗು ಜಿಲ್ಲಾಡಳಿತದ ಪ್ರಮುಖರು ಉಪಸ್ಥಿತರಿರಲಿದ್ದು, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮೀನಾಕ್ಷಿ ನೇಗಿ, ವನ್ಯಜೀವಿ ವಿಭಾಗದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕುಮಾರ್ ಪುಷ್ಕರ್, ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್ ರಾಜನ್ ಸೇರಿ ಹಲವರು ಪಾಲ್ಗೊಳ್ಳಲಿದ್ದಾರೆ.
ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಸುಭಾಷಿಣಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಸೌರಭ್ ಕುಮಾರ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ.ಕೆ. ಮಧುಸೂದನ್, ಯಸಳೂರು ವಲಯ ಅರಣ್ಯಾಧಿಕಾರಿ ರೇವಣಸಿದ್ದಯ್ಯ ಬಿ.ಹಿರೇಮಠ್ ಇತರರು ಭಾಗವಹಿಸಲಿದ್ದಾರೆ.
