ಅರಕಲಗೂಡು: ತಾಲ್ಲೂಕಿನ ದೊಡ್ಡಮಗ್ಗೆ ಹೋಬಳಿ ಪಾರಸನಹಳ್ಳಿ, ಸಂತೆಮರೂರು ಗ್ರಾಮದ ಜಮೀನಿನಲ್ಲಿ ಮಂಗಳವಾರ ಚಿರತೆ ಕಾಣಿಸಿಕೊಂಡಿದ್ದು ರೈತರಲ್ಲಿ ಆತಂಕ ಹುಟ್ಟಿಸಿದೆ.
ಸಂತೆಮರೂರು ಕೃಷಿ ಜಮೀನಿನಲ್ಲಿ ಚಿರತೆ ಮರಿಯೊಂದಿಗೆ ಸಂಚಾರ ಮಾಡಿರುವ ಹೆಜ್ಜೆ ಗುರುತು ಪತ್ತೆಯಾಗಿದೆ. ಅಲ್ಲದೆ ಪಾರಸನಹಳ್ಳಿ ಗ್ರಾಮದ ಕೃಷಿ ಜಮೀನಿನಲ್ಲಿಯೂ ಚಿರತೆ ಕಾಣಿಸಿಕೊಂಡಿದೆ. ಅರಣ್ಯ ಇಲಾಖೆಯಿಂದ ಚಿರತೆ ಸೆರೆಗೆ ಬೋನು ಇಡಲಾಗಿದೆ. ಆದರೆ ಚಿರತೆ ಮರಿಯೊಂದಿಗೆ ಅಕ್ಕಪಕ್ಕದ ಗ್ರಾಮಗಳ ಕೃಷಿ ಜಮೀನುಗಳ ಬಳಿ ಒಡಾಡಿರುವ ಹೆಜ್ಜೆ ಗುರುತು ಪತ್ತೆಯಾಗಿದೆ.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳಾದ ಪ್ರವೀಣ್‌, ಪಾಷಾ ಮತ್ತು ಸಿಬ್ಬಂದಿ ಚಿರತೆಯ ಹೆಜ್ಜೆ ಗುರುತು ಖಾತ್ರಿಪಡಿಸಿದ್ದಾರೆ. ಅಲ್ಲದೆ ಪಟಾಕಿ ಸಿಡಿಸಿದ್ದಾರೆ. ಸಂತೆಮರೂರು ಸಮೀಪದಲ್ಲಿ ಅರಣ್ಯ ಪ್ರದೇಶವಿದ್ದು, ಚಿರತೆ ಈ ಭಾಗದಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿದೆ ಎಂದು ರೈತರು ಮಾಹಿತಿ ನೀಡಿದ್ದಾರೆ.
ಹಲವು ವರ್ಷಗಳ ಹಿಂದೆ ಸಂತೆಮರೂರು ಗ್ರಾಮ ಸಮೀಪದ ತೋಟದ ಮನೆಯಿಂದ ಬಾಲಕನನ್ನು ಚಿರತೆ ಹೊತ್ತೋಯ್ದು ಬಲಿತೆಗೆದುಕೊಂಡಿತ್ತು. ಅದಾದ ಹಲವು ವರ್ಷಗಳಲ್ಲಿ ಚಿರತೆ ಈ ಭಾಗದಲ್ಲಿ ಕಾಣಿಸಿಕೊಂಡಿರಲಿಲ್ಲ. ಇತ್ತೀಚಿಗೆ ಸಂತೆಮರೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಚಿರತೆ ಮರಿಯೊಂದಿಗೆ ಕಾಣಿಸಿಕೊಳ್ಳುತ್ತಿರುವುದನ್ನು ಜನರು ಕಣ್ಣಾರೆ ಕಂಡಿದ್ದಾರೆ.

Leave a Reply

Your email address will not be published. Required fields are marked *