ಸಕಲೇಶಪುರ: ಕೃಷಿ ಚಟುವಟಿಕೆಗೆ ತೆರಳಿದ್ದ ಯುವ ರೈತರೊಬ್ಬರು ೧೧ ಕೆ.ವಿ. ವಿದ್ಯುತ್ ಮಾರ್ಗಕ್ಕೆ ಅಲ್ಯೂಮಿನಿಯಂ ಏಣಿ ತಗುಲಿ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಬೆಳಗೋಡು ಹೋಬಳಿಯ ಕೆಲವಳ್ಳಿ ಗ್ರಾಮದಲ್ಲಿ ಗುರುವಾರ ಬೆಳಗ್ಗೆ ನಡೆದಿದೆ.
ಕುನಿಗನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಲವಳ್ಳಿ ಗ್ರಾಮದ ಅಭಿಷೇಕ್ (36) ಮೃತಪಟ್ಟವರು.
ಕೃಷಿ ಕೆಲಸಕ್ಕೆ ತೆರಳಿದ್ದ ವೇಳೆ ಅಲ್ಯೂಮಿನಿಯಂ ಏಣಿ ೧೧ ಕೆ.ವಿ. ವಿದ್ಯುತ್ ಮಾರ್ಗಕ್ಕೆ ತಗುಲಿದ್ದು, ವಿದ್ಯುತ್ ಪ್ರವಹಿಸಿ ಅಭಿಷೇಕ್ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಅಭಿಷೇಕ್ ಅವರ ತಂದೆ ನಿವೃತ್ತ ಸೈನಿಕರಾಗಿದ್ದು, ತಂದೆಯ ನಿಧನದ ಬಳಿಕ ಕೃಷಿಯ ಜವಾಬ್ದಾರಿಯನ್ನು ಅಭಿಷೇಕ್ ವಹಿಸಿಕೊಂಡಿದ್ದರು. ಕೃಷಿಯನ್ನೇ ನಂಬಿಕೊಂಡು ಉತ್ತಮವಾಗಿ ಕೃಷಿ ಚಟುವಟಿಕೆ ನಡೆಸುತ್ತಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಯುವ ರೈತನ ಆಕಸ್ಮಿಕ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಘಟನೆ ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
