ಬೇಲೂರು: ಶುಂಠಿ ಬೆಳೆಯಲು ಗುತ್ತಿಗೆ ಆಧಾರದಲ್ಲಿ ಜಮೀನು ನೀಡಿದ್ದ ಮಾಲೀಕನ ಮೇಲೆ ಪಿಕಾಸಿಯಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ತಾಲ್ಲೂಕಿನ ನೆಟ್ಟೇಕೆರೆ ಗ್ರಾಮದಲ್ಲಿ ಬುಧವಾರ ನಡೆದಿದೆ.
ಗ್ರಾಮದ ಚಂದ್ರೇಗೌಡ ಗಾಯಾಳು. ಬಿಕ್ಕೋಡಿನ ಸಂತೋಷ್‌ ಹಾಗು ಆಲೂರು ತಾಲ್ಲೂಕು ಕೋಟಿಗನಹಳ್ಳಿ ಗ್ರಾಮದ ಕುಮಾರ್‌ ಎಂಬುವವರು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಒಂದು ವರ್ಷದ ಅವಧಿಗೆ ಚಂದ್ರೇಗೌಡ ತಮ 1 ಎಕರೆ ಭೂಮಿಯನ್ನು 75 ಸಾವಿರ ರೂ.ಗೆ ನೀಡಿದ್ದರು. ಆರೋಪಿಗಳಿಬ್ಬರೂ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಚಂದ್ರೇಗೌಡ ತೆರಳಿ ಹಣ ನೀಡುವಂತೆ ಕೇಳಿದ್ದಾರೆ. ಈ ವಿಚಾರವಾಗಿ ಪರಸ್ಪರ ಗಲಾಟೆ ನಡೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಜಗಳ ತಾರಕಕ್ಕೇರುತ್ತಿದ್ದಂತೆ ಚಂದ್ರೇಗೌಡ ಅವರ ಸಹೋದರ ಕುಮಾರ್‌ ಜಗಳ ಬಿಡಿಸಲು ಜನರನ್ನು ಕರೆತರಲು ಊರಿಗೆ ಬಂದಿದ್ದಾರೆ. ವಾಪಾಸ್‌‍ ಹೋಗುವಷ್ಟರಲ್ಲಿ ಪಿಕಾಸಿಯಿಂದ ಹಲ್ಲೆ ನಡೆಸಿದ್ದಾರೆ. ತಲೆ ಹಾಗು ಮುಖಕ್ಕೆ ಬಲವಾಗಿ ಹೊಡೆದಿದ್ದರಿಂದ ಚಂದ್ರೇಗೌಡ ಅವರು ಅಸ್ವಸ್ಥರಾಗಿ ಬಿದ್ದಿದ್ದರೆಂದು ತಿಳಿದುಬಂದಿದೆ.
ಖಾಸಗಿ ವಾಹನದಲ್ಲಿ ಅವರನ್ನು ಆಸ್ಪತ್ರೆಗೆ ಕರೆತರಲಾಯಿತು. ಗ್ರಾಮೀಣ ಠಾಣೆ ಪೊಲೀಸರು ಗಾಯಾಳು ಚಂದ್ರೇಗೌಡರ ಹೇಳಿಕೆ ಪಡೆದಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *