ಅರಕಲಗೂಡು: ಮನೆಯ ಮುಂದಿನ ರಸ್ತೆಯಲ್ಲಿ ಶವವನ್ನು ಸಾಗಿಸಲು ಅವಕಾಶ ನೀಡುವುದಿಲ್ಲ ಎಂದು ಕೆಲವರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಮೃತದೇಹವನ್ನು ರಸ್ತೆಯಲ್ಲೇ ಕೆಲಕಾಲ ಇರಿಸಿದ ಘಟನೆ ತಾಲ್ಲೂಕಿನ ಕೊಣನೂರು ಹೋಬಳಿಯ ಮಜ್ಜನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಮಡಿವಾಳ ಜನಾಂಗಕ್ಕೆ ಸೇರಿದ ತಂಗ್ಯಮ್ಮ (60) ಅವರು ಗುರುವಾರ ರಾತ್ರಿ ಮೃತಪಟ್ಟಿದ್ದರು. ಶುಕ್ರವಾರ ಮೃತದೇಹವನ್ನು ಅಂತ್ಯಸಂಸ್ಕಾರಕ್ಕಾಗಿ ಶ್ಮಶಾನಕ್ಕೆ ಕೊಂಡೊಯ್ಯುವ ಸಂದರ್ಭದಲ್ಲಿ, ಮನೆಯ ಮುಂದಿನ ರಸ್ತೆಯಲ್ಲಿ ಶವವನ್ನು ಸಾಗಿಸಲು ಬಿಡುವುದಿಲ್ಲ ಎಂದು ಅಲ್ಲಿನ ಕೆಲ ಕುಟುಂಬಗಳು ವಿರೋಧ ವ್ಯಕ್ತಪಡಿಸಿದವು. ಇದರಿಂದ ಮೃತದೇಹವನ್ನು ಸುಮಾರು ಒಂದೂವರೆ ಗಂಟೆಗಳ ಕಾಲ ರಸ್ತೆಯಲ್ಲೇ ಇರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು.
ಸ್ಥಳಕ್ಕೆ ಆಗಮಿಸಿದ 112 ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿ, ಪರ್ಯಾಯ ರಸ್ತೆಯ ಮೂಲಕ ಮೃತದೇಹವನ್ನು ಸ್ಮಶಾನಕ್ಕೆ ಸಾಗಿಸಲು ಅನುವು ಮಾಡಿಕೊಟ್ಟರು. ಶವ ಸಂಸ್ಕಾರಕ್ಕೆ ಅಗತ್ಯವಿದ್ದ ಸೌದೆಯನ್ನು ತರಲು ರಸ್ತೆಯಲ್ಲಿ ಅಡ್ಡಿಪಡಿಸಿದ ಸಂದರ್ಭದಲ್ಲೂ ಪೊಲೀಸರು ಮಧ್ಯಪ್ರವೇಶಿಸಿ, ಸೌದೆ ತುಂಬಿದ್ದ ಟ್ರ್ಯಾಕ್ಟರ್‌ ಅನ್ನು ಸ್ವತಃ ಚಲಾಯಿಸಿಕೊಂಡು ಬಂದು ಅಂತ್ಯಸಂಸ್ಕಾರಕ್ಕೆ ಅವಕಾಶ ಮಾಡಿಕೊಟ್ಟರು.
ಘಟನೆ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್‌ ಕೆ.ಸಿ. ಸೌಮ್ಯ ಅವರು ಗ್ರಾಮಸ್ಥರೊಂದಿಗೆ ಚರ್ಚಿಸಿದರು. ಸರ್ಕಾರಿ ರಸ್ತೆಯಲ್ಲಿ ಮೃತದೇಹವನ್ನು ಸಾಗಿಸಲು ಯಾರೂ ಅಡ್ಡಿಪಡಿಸಬಾರದು ಎಂದು ಸ್ಪಷ್ಟಪಡಿಸಿದರು.
ಸ್ಮಶಾನಕ್ಕೆ ತೆರಳುವ ರಸ್ತೆ ಸಂಪೂರ್ಣವಾಗಿ ಅಭಿವೃದ್ಧಿಯಾಗದೆ ಇರುವುದರಿಂದ ಸಮಸ್ಯೆ ಉಂಟಾಗಿದೆ. ವಿಜಿಬಿ ರಾಮ್‌ಜಿ ಯೋಜನೆಯಡಿ ರಸ್ತೆಯನ್ನು ಅಭಿವೃದ್ಧಿಪಡಿಸಿ ಸ್ಮಶಾನದವರೆಗೆ ಸುಗಮ ಸಂಪರ್ಕ ಕಲ್ಪಿಸಲಾಗುವುದು ಎಂದು ತಹಸೀಲ್ದಾರ್ ತಿಳಿಸಿದರು. ಮುಂದಿನ ದಿನಗಳಲ್ಲಿ ಇದೇ ರಸ್ತೆಯಲ್ಲಿ ಮೃತದೇಹಗಳನ್ನು ಸ್ಮಶಾನಕ್ಕೆ ಕೊಂಡೊಯ್ಯಲು ಯಾವುದೇ ರೀತಿಯ ಅಡ್ಡಿಪಡಿಸಬಾರದು ಎಂದು ಗ್ರಾಮಸ್ಥರಿಗೆ ಸೂಚಿಸಿದರು.

Leave a Reply

Your email address will not be published. Required fields are marked *