ಹಾಸನ: ಪ್ಲಾಸ್ಟಿಕ್ ಚೀಲದಲ್ಲಿ ತುಂಬಿದ್ದ ವೃದ್ಧೆಯ ಶವವೊಂದು ನಾಲೆಯಲ್ಲಿ ಪತ್ತೆಯಾಗಿರುವ ಘಟನೆ ಅರಕಲಗೂಡು ತಾಲ್ಲೂಕಿನ ಬೆಟ್ಟದಹಳ್ಳಿ ಗ್ರಾಮದ ಬಳಿ ನಡೆದಿದೆ.
ಹಿರೀಹಳ್ಳಿಕೊಪ್ಪಲು ಗ್ರಾಮದ ಲಕ್ಷ್ಮಮ್ಮ (67) ಮೃತಪಟ್ಟವರು. ಅವರು ಪತಿ ಅಣ್ಣೇಗೌಡ ಅವರೊಂದಿಗೆ ವಾಸವಾಗಿದ್ದರು.
ಶನಿವಾರ ವಿಜಯಕೊಪ್ಪಲು ಗ್ರಾಮಕ್ಕೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಟಿದ್ದ ಲಕ್ಷ್ಮಮ್ಮ ಬಳಿಕ ಮನೆಗೆ ಮರಳಿರಲಿಲ್ಲ. ಶನಿವಾರದಿಂದ ಕಾಣೆಯಾಗಿದ್ದ ಹಿನ್ನೆಲೆಯಲ್ಲಿ ಪತಿ ಅಣ್ಣೇಗೌಡ ಅವರು ನಿನ್ನೆ ಪೊಲೀಸ್ ಠಾಣೆಗೆ ದೂರು ನೀಡಲು ತೆರಳಿದ್ದರು.
ಈ ನಡುವೆ ಬೆಟ್ಟದಹಳ್ಳಿ ಗ್ರಾಮದ ಬಳಿಯ ನಾಲೆಯಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿದ್ದ ಲಕ್ಷ್ಮಮ್ಮ ಅವರ ಶವ ಪತ್ತೆಯಾಗಿದೆ. ಅವರನ್ನು ಕೊಲೆ ಮಾಡಿ, ಚಿನ್ನಾಭರಣಕ್ಕಾಗಿ ದೋಚಿ ಬಳಿಕ ಶವವನ್ನು ಚೀಲದಲ್ಲಿ ತುಂಬಿ ನಾಲೆಗೆ ಎಸೆದಿರುವ ಶಂಕೆ ವ್ಯಕ್ತವಾಗಿದೆ.
ವಿಷಯ ತಿಳಿದು ಸ್ಥಳಕ್ಕೆ ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭನ್ವಿತಾ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೊಣನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Leave a Reply

Your email address will not be published. Required fields are marked *