ಅರಕಲಗೂಡು: ಹಬ್ಬದ ಹಿನ್ನೆಲೆಯಲ್ಲಿ ಮಾವನ ಮನೆಗೆ ಬಂದಿದ್ದ 12 ವರ್ಷದ ಬಾಲಕನೊಬ್ಬ ವಿದ್ಯುತ್ ಶಾಕ್‌ಗೆ ಒಳಗಾಗಿ ಮೃತಪಟ್ಟಿರುವ ದುರ್ಘಟನೆ ಅರಕಲಗೂಡು ತಾಲ್ಲೂಕಿನ ಸೋಮನಹಳ್ಳಿ ಗ್ರಾಮದಲ್ಲಿ ಬುಧವಾರ ನಡೆದಿದೆ.
ಮೃತ ಬಾಲಕನನ್ನು ಕಟ್ಟಾಯ ಹೋಬಳಿಯ ಕಾರ್ಲೇ ಮುಕಂದೂರು ಗ್ರಾಮದ ಗಿರೀಶ್ ಅವರ ಪುತ್ರ ಶರತ್ (12) ಎಂದು ಗುರುತಿಸಲಾಗಿದೆ.
ಶರತ್ ಹಬ್ಬಕ್ಕೆಂದು ಅರಕಲಗೂಡು ತಾಲ್ಲೂಕಿನ ಸೋಮನಹಳ್ಳಿ ಗ್ರಾಮದ ತನ್ನ ಮಾವನ ಮನೆಗೆ ಬಂದಿದ್ದ ಎನ್ನಲಾಗಿದೆ. ಈ ವೇಳೆ ಮನೆಯ ಸಂಪ್‌ಗೆ ಅಳವಡಿಸಲಾಗಿದ್ದ ಮೋಟಾರ್‌ನ ವಿದ್ಯುತ್ ಸಂಪರ್ಕದಿಂದ ಶಾಕ್‌ಗೆ ಒಳಗಾಗಿದ್ದಾನೆ ಎನ್ನಲಾಗಿದೆ.
ವಿದ್ಯುತ್ ಶಾಕ್‌ಗೆ ಒಳಗಾದ ಬಾಲಕನನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲು ಕುಟುಂಬಸ್ಥರು ಹಾಗೂ ಸ್ಥಳೀಯರು ಪ್ರಯತ್ನಿಸಿದರಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.
ಒಬ್ಬನೇ ಮಗನನ್ನು ಕಳೆದುಕೊಂಡ ಕುಟುಂಬ
ಶರತ್ ತನ್ನ ತಂದೆ-ತಾಯಿಗೆ ಒಬ್ಬನೇ ಮಗನಾಗಿದ್ದು, ಮುದ್ದಿನ ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಹಬ್ಬದ ಸಂಭ್ರಮಕ್ಕಾಗಿ ಮಾವನ ಮನೆಗೆ ಬಂದಿದ್ದ ಬಾಲಕನ ದುರಂತ ಸಾವು ಕುಟುಂಬಸ್ಥರಿಗೆ ಆಘಾತವನ್ನುಂಟು ಮಾಡಿದ್ದು, ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.
ಬಾಲಕನ ಅಕಾಲಿಕ ಸಾವಿನಿಂದ ಸಂಬಂಧಿಕರು ಹಾಗೂ ಗ್ರಾಮಸ್ಥರು ದುಃಖತಪ್ತರಾಗಿದ್ದಾರೆ.
ಘಟನೆ ಕುರಿತು ಪೊಲೀಸರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ಘಟನೆಯ ನಿಖರ ಕಾರಣದ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
