ಸಕಲೇಶಪುರ: ಪಟ್ಟಣದ ಶ್ರೀಗಂಧ ಹೋಟೆಲ್ ಸಮೀಪ ನೂರಾರು ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್‌ಗಳನ್ನು ಸುಟ್ಟು ಹಾಕಿರುವ ಘಟನೆ ಬೆಳಕಿಗೆ ಬಂದಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ.
ಹಾಸನ, ರಾಮನಗರ, ಕೊಟ್ಟೂರು, ಬಳ್ಳಾರಿ, ವಿಜಯಪುರ, ಮೈಸೂರು ಸೇರಿದಂತೆ ವಿವಿಧ ಜಿಲ್ಲೆಗಳ ಹಾಗೂ ಆಂಧ್ರಪ್ರದೇಶದ ನಿವಾಸಿಗಳಿಗೆ ಸೇರಿದ ದಾಖಲೆಗಳು ಸ್ಥಳದಲ್ಲಿ ಪತ್ತೆಯಾಗಿವೆ. ಕೆಲವು ದಾಖಲೆಗಳನ್ನು ಸುಟ್ಟು ಹಾಕಲಾಗಿದ್ದು, ಉಳಿದ ನೂರಾರು ಮಹಿಳೆಯರು ಮತ್ತು ಪುರುಷರಿಗೆ ಸೇರಿದ ಗುರುತಿನ ಚೀಟಿಗಳು ಅದರ ಪಕ್ಕದಲ್ಲೇ ಬಿದ್ದಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.
ವಿವಿಧ ಜಿಲ್ಲೆಗಳು ಹಾಗೂ ಹೊರರಾಜ್ಯದವರ ದಾಖಲೆಗಳು ಒಂದೇ ಸ್ಥಳದಲ್ಲಿ ಪತ್ತೆಯಾಗಿರುವುದು ಸಾರ್ವಜನಿಕರಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈ ದಾಖಲೆಗಳನ್ನು ಯಾರು ತಂದು ಹಾಕಿದ್ದಾರೆ, ಯಾವ ಉದ್ದೇಶಕ್ಕಾಗಿ ಸುಟ್ಟು ಹಾಕಲಾಗಿದೆ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ.
ಘಟನೆ ಗಮನಕ್ಕೆ ಬಂದ ತಕ್ಷಣ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೂ ವಿಷಯವನ್ನು ತಂದಿದ್ದು, ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಿ ದಾಖಲೆಗಳು ಇಲ್ಲಿ ಪತ್ತೆಯಾಗಿರುವ ಹಿಂದಿನ ಕಾರಣವನ್ನು ಬಹಿರಂಗಪಡಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
