ಹಾಸನ: ಹಾಸನಾಂಬ ದೇವಿಯ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ಭಕ್ತರ ಪ್ರವಾಹ ತೀವ್ರಗತಿಯಲ್ಲಿ ಬರುತ್ತಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಹೊರ ಜಿಲ್ಲೆಯ ಬಸ್ ಗಳ ಸಂಚಾರ ನಿಲ್ಲಿಸಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮೊಹಮ್ಮದ್ ಸುಜೀತಾ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿಗೆ ಪತ್ರ ಬರೆದಿದ್ದಾರೆ. ರಾಜ್ಯದ ವಿವಿಧ ಭಾಗಗಳಿಂದ ಹಾಗೂ ಹೊರ ರಾಜ್ಯಗಳಿಂದ ಸಾವಿರಾರು ಮಂದಿ ಭಕ್ತರು ದೇವಿಯ ದರ್ಶನಕ್ಕಾಗಿ ಹಾಸನ ನಗರಕ್ಕೆ ಆಗಮಿಸುತ್ತಿದ್ದಾರೆ.

ಭಕ್ತರ ಅಪಾರ ಸಂಖ್ಯೆಯಿಂದ ದೇವರ ದರ್ಶನಕ್ಕಾಗಿ ಕಲ್ಪಿಸಿರುವ ಸ್ಥಳಾವಕಾಶ ಸಾಕಾಗದೆ, ಸಾಮಾನ್ಯ ಹಾಗೂ ವಿಶೇಷ ದರ್ಶನ ಸರತಿಗಳು ಮೂರು ರಿಂದ ನಾಲ್ಕು ಕಿಲೋಮೀಟರ್ ದೂರದವರೆಗೆ ಹಾಸನ ನಗರದ ಪ್ರಮುಖ ರಸ್ತೆಗಳಲ್ಲಿ ವಿಸ್ತರಿಸಿವೆ.
ಮುಂದಿನ ದಿನಗಳಲ್ಲಿ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ದೀರ್ಘ ರಜೆಗಳು ಇರುವುದರಿಂದ ಭಕ್ತರ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆ ಇದೆ. ಹಾಸನ ನಗರ ಚಿಕ್ಕದಾಗಿದ್ದು, ದೇವಸ್ಥಾನದ ಸುತ್ತಮುತ್ತ ಸ್ಥಳಾವಕಾಶ ಸೀಮಿತವಾಗಿರುವುದರಿಂದ ಜನಸಂದಣಿ ನಿಯಂತ್ರಣ ದೊಡ್ಡ ಸವಾಲಾಗಿದೆ.
ಹೊರ ಜಿಲ್ಲೆಗಳಿಂದ ಕೆಎಸ್‌ಆರ್‌ಟಿಸಿ ಬಸ್‌ಗಳು ಮತ್ತು ಖಾಸಗಿ ವಾಹನಗಳಲ್ಲಿ ಆಗಮಿಸುವ ಭಕ್ತರನ್ನು ನಿಯಂತ್ರಿಸುವ ಕ್ರಮ ಕೈಗೊಳ್ಳುವಂತೆ ವಿನಂತಿಸಿದ್ದಾರೆ.
ಭಕ್ತರ ಸಂಖ್ಯೆಯನ್ನು ನಿಯಂತ್ರಿಸದಿದ್ದಲ್ಲಿ ಸರತಿ ಸಾಲುಗಳಲ್ಲಿ ನೂಕುನುಗ್ಗಲು ಹಾಗೂ ಕಾಲ್ತುಳಿತದಂತಹ ಅಹಿತಕರ ಘಟನೆ ಸಂಭವ ಹೆಚ್ಚಿದೆ. ಅಂತಹ ಘಟನೆಗಳು ಸಂಭವಿಸಿದಲ್ಲಿ ಪೊಲೀಸ್ ಇಲಾಖೆಯು ಯಾವುದೇ ರೀತಿಯ ಜವಾಬ್ದಾರರಾಗುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

Leave a Reply

Your email address will not be published. Required fields are marked *