ಹಾಸನ: ನನ್ನನ್ನು ಜಿಲ್ಲೆಯ ಜನರೇ ಬೆಳೆಸಿದ್ದಾರೆ. 93ನೇ ವಯಸ್ಸಿನಲ್ಲೂ ಬದುಕಿರಲು ಜನರ ಆಶೀರ್ವಾದವೇ ಕಾರಣ. ನನ್ನ ಜೀವನದ ಕೊನೆಯ ಉಸಿರು ಇರುವವರೆಗೂ ಅವರ ಬೆಂಬಲವನ್ನು ಮರೆಯೋದಿಲ್ಲ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಹೇಳಿದರು.
ಹೊಳೆನರಸೀಪುರದ ಹರದನಹಳ್ಳಿಯಲ್ಲಿ ಕುಲ ದೇವರು ದೇವೇಶ್ವರನಿಗೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಮೊದಲ ಬಾರಿಗೆ ಹಾಸನದಲ್ಲಿ 25ನೇ ವರ್ಷದ ಸಮಾವೇಶ ನಡೆಯುತ್ತಿದ್ದು, ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ತಾವು ಹಾಗೂ ಕುಮಾರಸ್ವಾಮಿ ಬಂದಿದ್ದೇವೆ. ಕಾರ್ಯಕ್ರಮದ ಯಶಸ್ಸಿಗೆ ಜಿಲ್ಲೆಯ ನಾಯಕರು ಮತ್ತು ಕಾರ್ಯಕರ್ತರು ಶ್ರಮಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾಂಗ್ರೆಸ್ ಪಕ್ಷವು ಎರಡುವರೆ ವರ್ಷಗಳಲ್ಲಿ ಜಿಲ್ಲೆ ಒಂದರಲ್ಲೇ ಹೆಜ್ಜೆ ಇಟ್ಟು ಜೆಡಿಎಸ್ ಮುಗಿಸಲು ಪ್ರಯತ್ನಿಸಿದೆ ಎಂದು ಆರೋಪಿಸಿದರು.
ಜಿಲ್ಲೆಯ ಜನರ ಬೆಂಬಲದಿಂದಲೇ ಜೆಡಿಎಸ್ ರಾಜ್ಯದಲ್ಲಿ ಹಂತ ಹಂತವಾಗಿ ಬೆಳೆದಿದೆ. ತಾವು ಸಾಮಾನ್ಯ ಶಾಸಕರಾಗಿ ಆಯ್ಕೆಯಾಗಿ, ನಂತರ ಹಂತ ಹಂತವಾಗಿ ಪ್ರಧಾನಮಂತ್ರಿ ಹುದ್ದೆವರೆಗೂ ಹೋಗುವ ಅವಕಾಶ ದೊರೆತಿದೆ ಎಂದು ಸ್ಮರಿಸಿದರು.
ರಾಜಕೀಯ ಜೀವನದ 65 ವರ್ಷಗಳಲ್ಲಿ ನೋವು–ನಲಿವು ಎರಡನ್ನೂ ಅನುಭವಿಸಿದ್ದೇನೆ. ಈ ಹಿನ್ನೆಲೆಯಲ್ಲೇ ಪಕ್ಷ ಉಳಿಸಬೇಕೆಂಬ ಉದ್ದೇಶದಿಂದ ಎಲ್ಲರೂ ಸೇರಿ ಸಮಾವೇಶ ಆಯೋಜನೆ ಮಾಡಲಾಗಿದೆ. ಐಕ್ಯತೆಯಿಂದ ಎಲ್ಲರೂ ದುಡಿದಿದ್ದು, ಕಾರ್ಯಕ್ರಮ ಯಶಸ್ವಿಯಾಗಬೇಕು ಎಂಬ ಆಶಯದಿಂದ ಕಾರ್ಯಕರ್ತರೆಲ್ಲರೂ ಸಮಾವೇಶಕ್ಕೆ ಆಗಮಿಸಿದ್ದಾರೆ ಎಂದು ಹೇಳಿದರು.
H. D. Deve Gowda 