ಹಾಸನ: ನಗರ ಹೊರವಲಯದ ಹೂವಿನಹಳ್ಳಿ ಕಾವಲು ಸಮೀಪದ ಹೊಯ್ಸಳ ರೆಸಾರ್ಟ್ ಬಳಿ ಇಂದು ವೆನ್ಯು ಕಾರು ಹಾಗೂ ಲೈಲ್ಯಾಂಡ್ ಮಿನಿ ಟ್ರಕ್ ಗೂಡ್ಸ್ ವಾಹನದ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಗೂಡ್ಸ್ ವಾಹನ ಪಲ್ಟಿಯಾಗಿದೆ. ಭೀಕರ ಎನಿಸುವಂತಹ ಅಪಘಾತದಲ್ಲಿಯೂ ನಾಲ್ವರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆಯ ವಿವರ:
ವೆನ್ಯು ಕಾರು ಹಾಗೂ ಲೇಲ್ಯಾಂಡ್ ವಾಹನ ಮುಖಾಮುಖಿ ಡಿಕ್ಕಿಯಾಗಿವೆ. ಅಪಘಾತದ ತೀವ್ರತೆಗೆ ಎರಡೂ ವಾಹನಗಳು ಬಹುತೇಕ ನುಜ್ಜುಗುಜ್ಜಾಗಿದ್ದು, ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಅದೃಷ್ಟವಶಾತ್ ಪ್ರಾಣಾಪಾಯವಿಲ್ಲ:
ಕಾರಿನಲ್ಲಿದ್ದ ಇಬ್ಬರು ಮತ್ತು ಗೂಡ್ಸ್ ವಾಹನದಲ್ಲಿದ್ದ ಇಬ್ಬರು ಸೇರಿದಂತೆ ಒಟ್ಟು ನಾಲ್ವರಿಗೆ ಕೇವಲ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿ*ತ್ಸೆ ನೀಡಲಾಗುತ್ತಿದೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತದಿಂದಾಗಿ ಕೆಲಕಾಲ ರಸ್ತೆ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ಕ್ರೇನ್ ಮೂಲಕ ಜಖಂಗೊಂಡ ವಾಹನಗಳನ್ನು ರಸ್ತೆಯಿಂದ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಈ ಕುರಿತು ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
